ತುಂಗಾವಾಣಿ.
ಗಂಗಾವತಿ: ಇದು ಮರಳಿಯ ಕಥೆ ಮಾತ್ರವಲ್ಲ, ಹಸಿವಿನ ನಡುವೆ ಅಕ್ಷರ ಹುಡುಕುವ ಪ್ರತಿ ಹಳ್ಳಿಯ ಕಣ್ಣೀರ ಕಥೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಆ ಸರ್ಕಾರಿ ಪ್ರೌಢಶಾಲೆಯ ಗೋಡೆಗಳಿಗೆ ಇಂದು ಹನ್ನೆರಡು ಜೀವಗಳ ಬಿಕ್ಕಳಿಕೆ ಕೇಳಿಸುತ್ತಿದೆ. ಬೋರ್ಡ್ ಪರೀಕ್ಷೆ ಎಂಬ ಯುದ್ಧಕ್ಕೆ ಸಜ್ಜಾಗಬೇಕಿದ್ದ ಹನ್ನೆರಡು ಎಳೆ ಮನಸುಗಳು ಇಂದು ಬೀದಿಯಲ್ಲಿ ನಿಂತು ತಮ್ಮ ಹಕ್ಕಿಗಾಗಿ ಅಂಗಲಾಚುತ್ತಿವೆ.
ಕಾರಣ? ಹಾಜರಾತಿ ಕೊರತೆ!
ಅಸಲಿಗೆ ಈ ಹಾಜರಾತಿ ಕೊರತೆಯ ಹಿಂದೆ ಇರುವುದು ಐಷಾರಾಮಿ ಬದುಕಿನ ಸೋಮಾರಿತನವಲ್ಲ, ಹೊಟ್ಟೆಗಿಲ್ಲದ ಬಡತನದ ಕ್ರೂರ ಮುಖ. ಆ ಶಾಲೆಯಲ್ಲಿ ಓದುವವರು ಮಂತ್ರಿ-ಮಹೋದಯರ ಮಕ್ಕಳಲ್ಲ, ಎಸಿ ರೂಮಿನಲ್ಲಿ ಕೂತು ಆದೇಶ ಹೊರಡಿಸುವ ಅಧಿಕಾರಿಗಳ ವಾರಸುದಾರರಲ್ಲ. ಅವರು ಕೂಲಿ ಮಾಡುವವರ, ದನ ಕಾಯುವವರ ಮಕ್ಕಳು. ಮನೆಯಲ್ಲಿ ಅಪ್ಪ-ಅಮ್ಮನಿಗೆ ಆಸರೆಯಾಗಲು, ಕೈಗೆ ಸಿಕ್ಕ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಆ ಮಕ್ಕಳು ಗದ್ದೆಗಿಳಿಯುತ್ತಾರೆ, ದನಗಳ ಹಿಂದೆ ಓಡುತ್ತಾರೆ. ಹೀಗೆ ಬಡತನದ ಸುಳಿಯಲ್ಲಿ ಸಿಕ್ಕಿ ಬಿದ್ದಿರುವ ಈ ಮುಗ್ಧರ ಪಾಲಿಗೆ ಸರಕಾರದ ಈ 'ಹಾಜರಾತಿ' ನಿಯಮಗಳು ಬರೆ ಎಳೆದಂತಿವೆ.
ಶಿಕ್ಷಕರ ವಾದ:
ಮುಖ್ಯ ಶಿಕ್ಷಕಿ ಆಶಾ ಅವರದ್ದು ಅದೇ ಹಳೆಯ ರಾಗ. "ಹಾಜರಾತಿ ಇಲ್ಲ, ಕಿರು ಪರೀಕ್ಷೆ ಬರೆದಿಲ್ಲ, ಹಾಗಾಗಿ ಬೋರ್ಡ್ ಹಾಲ್ ಟಿಕೆಟ್ ಕಳುಹಿಸಿಲ್ಲ" ಎನ್ನುವ ಯಾಂತ್ರಿಕ ಸಮರ್ಥನೆ. ಆದರೆ ಪ್ರಶ್ನೆ ಇರೋದು ಇಲ್ಲಿ, ಆ ಮಕ್ಕಳು ಶಾಲೆಗೆ ಬಾರದಿದ್ದಾಗ ಅವರ ಪರಿಸ್ಥಿತಿ ಏನಿದೆ ಎಂದು ಕೇಳುವ ಕಾಳಜಿ ಯಾವ ಶಿಕ್ಷಕರಿಗಿತ್ತು? SFI ಹಾಗು ದಲಿತ ಸೇನೆಯ ಅಧ್ಯಕ್ಷ ಕೆ. ಮೌಲಾಲಿ ನೇತೃತ್ವದಲ್ಲಿ ಬಿಇಒ ಕಚೇರಿ ಮುಂದೆ ಈ ಮಕ್ಕಳು ಪ್ರತಿಭಟನೆಗೆ ಕೂತಾಗ, ಅವರ ಕಣ್ಣಲ್ಲಿ ಕಾಣುತ್ತಿದ್ದುದು ಅಕ್ಷರದ ಮೇಲಿನ ಪ್ರೀತಿ ಮತ್ತು ವ್ಯವಸ್ಥೆಯ ಮೇಲಿನ ಆಕ್ರೋಶ.
ಸಚಿವ ತಂಗಡಗಿಯವರೇ, ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ?
ಈಗ ಚೆಂಡು ಸಚಿವ ಶಿವರಾಜ್ ತಂಗಡಗಿಯವರ ಅಂಗಳದಲ್ಲಿದೆ. ಜಿಲ್ಲೆಯ ಉಸ್ತುವಾರಿ ಹೊತ್ತಿರುವ, ಬಡವರ ಧ್ವನಿಯಾಗಬಲ್ಲ ಶಕ್ತಿಯಿರುವ ಸಚಿವರು ಮನಸ್ಸು ಮಾಡಿದರೆ ಮಾತ್ರ ಈ ಕತ್ತಲೆಯಲ್ಲಿ ಒಂದು ಬೆಳಕು ಕಾಣಲು ಸಾಧ್ಯ. ನಿಯಮಗಳ ಕಡತಕ್ಕೆ ಕಿಚ್ಚು ಹಚ್ಚಿ, ಮಕ್ಕಳ ಭವಿಷ್ಯದ ಬಗ್ಗೆ ಮುತುವರ್ಜಿ ವಹಿಸಿದರೆ ಮಾತ್ರ ಈ ಹನ್ನೆರಡು ಜೀವಗಳು ಬದುಕುತ್ತವೆ. ಇಲ್ಲದಿದ್ದರೆ, ನಿಯಮದ ಹೆಸರಿನಲ್ಲಿ ನಾವು ಈ ಮಕ್ಕಳ ಕನಸಿಗೆ ನಾವೇ ಬೆಂಕಿ ಇಟ್ಟಂತಾಗುತ್ತದೆ.
ನಿಯಮಗಳು ಇರುವುದು ಮನುಷ್ಯನಿಗಾಗಿಯೇ ಹೊರತು, ಮನುಷ್ಯನ ಬಲಿಯನ್ನ ಪಡೆಯಲಿಕ್ಕಲ್ಲ. ಅಕ್ಷರ ಕಲಿಯುವ ಹಂಬಲವಿರುವ ಈ ಮಕ್ಕಳ ಕೈಗೆ ಪೆನ್ನು ಕೊಡುತ್ತೀರೋ ಅಥವಾ ಮತ್ತೆ ದನ ಕಾಯಲು ಕಳುಹಿಸುತ್ತೀರೋ? ಸಚಿವ ತಂಗಡಗಿಯವರೇ, ನಿಮ್ಮ ನಿರ್ಧಾರಕ್ಕಾಗಿ ಈ ಹನ್ನೆರಡು ಹಕ್ಕಿಗಳು ಕಾಯುತ್ತಿವೆ.
ಕಾಲ ಮಿಂಚುವ ಮುನ್ನ ಕಣ್ಣು ತೆರೆಯಿರಿ!
ನೈಜ ಸುದ್ದಿಗಾಗಿ ತುಂಗಾವಾಣಿ.