ತುಂಗಾವಾಣಿ.
"ಕುಷ್ಟಗಿ ನ್ಯಾಯಾಲಯದಲ್ಲಿ ಹೃದಯ ವಿದ್ರಾವಕ ಘಟನೆ:
ಆಸ್ತಿ ವಿಚಾರವಾಗಿ ವಾದಿಸುತ್ತಿದ್ದಾಗಲೇ ಅಂತ್ಯ"
ಕೋರ್ಟ್ ಕಲಾಪದಲ್ಲಿ ಮಗ್ನರಾಗಿ, ಕಕ್ಷಿದಾರರ ಪರವಾಗಿ ತೀವ್ರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲರೊಬ್ಬರು ಹೃದಯಾಘಾತದಿಂದ ನ್ಯಾಯಾಲಯದ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.
ತಾಲ್ಲೂಕಿನ ತಾವರಗೇರಾ ನಿವಾಸಿ ನಿಂಗಪ್ಪ ಸುದ್ದಿ (48) ಮೃತಪಟ್ಟ ದುರ್ದೈವಿ ವಕೀಲರು. ಅವರು ಕಳೆದ ಹಲವು ವರ್ಷಗಳಿಂದ ಕುಷ್ಟಗಿ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು.
ನಡೆದಿದ್ದೇನು?:
ಇಂದು ಬೆಳಿಗ್ಗೆ ನ್ಯಾಯಾಲಯದ ಕಲಾಪ ಆರಂಭವಾದ ಸಂದರ್ಭದಲ್ಲಿ, ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ಪರವಾಗಿ ನಿಂಗಪ್ಪ ಅವರು ವಾದ ಮಂಡಿಸುತ್ತಿದ್ದರು. ವಾದದ ನಡುವೆಯೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ನ್ಯಾಯಾಧೀಶರ ಎದುರೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹೋದ್ಯೋಗಿ ವಕೀಲರು ಮತ್ತು ಸಿಬ್ಬಂದಿ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ನಿಂಗಪ್ಪ ಅವರಿಗೆ ಈ ಹಿಂದೆಯೂ ಒಮ್ಮೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಆಗ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ (Stent) ಅಳವಡಿಸಲಾಗಿತ್ತು. ಇಂದು ವಾದದ ಒತ್ತಡದಲ್ಲಿ ಮತ್ತೆ ಹೃದಯಾಘಾತ ಸಂಭವಿಸಿರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ಕಂಬನಿ ಮಿಡಿದ ಸಹೋದ್ಯೋಗಿಗಳು:
ಹಿರಿಯ ವಕೀಲರ ನಿಧನಕ್ಕೆ ಕುಷ್ಟಗಿ ವಕೀಲರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನ್ಯಾಯಾಲಯದ ಕಲಾಪದ ವೇಳೆಯೇ ಈ ಘಟನೆ ಸಂಭವಿಸಿರುವುದು ಇಡೀ ಜಿಲ್ಲೆಯ ವಕೀಲ ಸಮೂಹವನ್ನು ದಿಗ್ಭ್ರಮೆಗೊಳಿಸಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ.