ತುಂಗಾವಾಣಿ.
ಬೆಂಗಳೂರು / ಕೊಪ್ಪಳ:
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸದ್ದಿಲ್ಲದೆ ಮಹತ್ವದ ಬದಲಾವಣೆಗಳ ಗಾಳಿ ಬೀಸತೊಡಗಿದೆ. ಪಕ್ಷದ ಶಿಸ್ತು ಮತ್ತು ಜವಾಬ್ದಾರಿಯ ವಿಷಯದಲ್ಲಿ ಹೈಕಮಾಂಡ್ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದ್ದು, ಇದರ ಬಿಸಿ ಈಗ ಕೊಪ್ಪಳ ಜಿಲ್ಲೆಯ ಗಂಗಾವತಿ ರಾಜಕೀಯ ವಲಯಕ್ಕೆ ತಟ್ಟಿದೆ.
ಹೌದು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಂಗಾವತಿಯ ಪ್ರಭಾವಿ ನಾಯಕ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ಅವರನ್ನು ಆ ಹುದ್ದೆಯಿಂದ ಮುಕ್ತಗೊಳಿಸಿರುವ ಆದೇಶ ಸ್ಥಳೀಯ ರಾಜಕೀಯದಲ್ಲಿ ಭಾರೀ ಕುತೂಹಲ ಹಾಗೂ ಸಂಚಲನಕ್ಕೆ ಕಾರಣವಾಗಿದೆ.
ಬೆಂಗಳೂರು ಸಭೆಗೆ ‘ಗೈರು’: ಹೈಕಮಾಂಡ್ ಗರಂ!
ಮೇ 25ರಂದು ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಅತ್ಯಂತ ಪ್ರಮುಖ ಸಭೆಯೊಂದನ್ನು ಆಯೋಜಿಸಲಾಗಿತ್ತು. ಮತದಾರರ ಪಟ್ಟಿಯಲ್ಲಿನ ಅಕ್ರಮ ತಡೆಯುವುದು ಹಾಗೂ ಮುಂಬರುವ ರಾಜಕೀಯ ಚದುರಂಗದಾಟಕ್ಕೆ ಕಾರ್ಯತಂತ್ರ ಹೆಣೆಯುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ನಿರ್ಣಾಯಕವಾಗಿತ್ತು.
ಆದರೆ, ಈ ಪ್ರಮುಖ ಸಭೆಗೆ ಕೆಪಿಸಿಸಿಯ ಹಲವು ಪದಾಧಿಕಾರಿಗಳು ಗೈರುಹಾಜರಾಗಿದ್ದರು. ಈ ಬೇಜವಾಬ್ದಾರಿತನದ ನಡೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೈಕಮಾಂಡ್ ನಿರ್ದೇಶನದ ಬೆನ್ನಲ್ಲೇ ಎಚ್ಚೆತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಭೆಗೆ ಗೈರಾದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ತಕ್ಷಣವೇ ಜವಾಬ್ದಾರಿಯಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ‘ಗೇಟ್ ಪಾಸ್’ ಪಟ್ಟಿಯಲ್ಲಿ ಎಚ್.ಆರ್. ಶ್ರೀನಾಥ್ ಅವರ ಹೆಸರಿರುವುದು ಈಗ ಗಂಗಾವತಿಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಡಿಕೆಶಿ ಆಪ್ತ ವಲಯದಲ್ಲೇ ಬದಲಾವಣೆಯ ಕಂಪನ?
ಟ್ವಿಸ್ಟ್ ಎಂದರೆ, ಎಚ್.ಆರ್. ಶ್ರೀನಾಥ್ ಅವರು ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ನಾಯಕ. ಇತ್ತೀಚಿನ ದಿನಗಳಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಶ್ರೀನಾಥ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಬೆನ್ನಲ್ಲೇ ಪಕ್ಷದ ಶಿಸ್ತಿನ ಹೆಸರಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡಿರುವುದು, ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದ್ದರೆ, ವಿರೋಧಿ ಪಾಳಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.
ಒಳರಾಜಕೀಯದ ಹೊಸ ಸಮೀಕರಣ?
ಗಂಗಾವತಿಯಲ್ಲಿ ಇತ್ತೀಚೆಗಷ್ಟೇ ಬಿಎಲ್-೨ ಹುದ್ದೆಗಳ ನೇಮಕಾತಿ ಅಧಿಕಾರವನ್ನು ಅನ್ಸಾರಿ ಅವರಿಂದ ಕೈಬಿಟ್ಟು, ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ವಹಿಸಲಾಗಿತ್ತು. ಆ ಮೂಲಕ ಹಿಟ್ನಾಳ್ ಅವರ ಕೈ ಮೇಲಾಗಿತ್ತು. ಈಗ ಶ್ರೀನಾಥ್ ಅವರ ವಜಾ ಕೂಡ ಸೇರಿಕೊಂಡಿರುವುದರಿಂದ ಗಂಗಾವತಿ ಕಾಂಗ್ರೆಸ್ನಲ್ಲಿ ‘ಶಕ್ತಿ ಸಮೀಕರಣ’ ಸಂಪೂರ್ಣ ಬದಲಾಗುತ್ತಿದೆಯೇ ಎಂಬ ಯಕ್ಷಪ್ರಶ್ನೆ ಎದುರಾಗಿದೆ.
ಪಕ್ಷದ ಶಿಸ್ತಿಗೆ ಮೊದಲ ಆದ್ಯತೆ
"ಪಕ್ಷದ ಸಂಘಟನೆ ಮತ್ತು ಹೈಕಮಾಂಡ್ ಆದೇಶ ಎಲ್ಲರಿಗಿಂತ ಮಿಗಿಲು. ಎಷ್ಟೇ ಪ್ರಭಾವಿ ನಾಯಕರಾಗಿದ್ದರೂ ಸಂಘಟನೆಯ ಚೌಕಟ್ಟಿಗೆ ಬದ್ಧರಾಗಿರಬೇಕು" ಎಂಬ ಸಂದೇಶವನ್ನು ನೀಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ಡಿಕೆಶಿ ಆಪ್ತರಿಗೇ ಕೋಕ್ ನೀಡಿರುವ ಕೆಪಿಸಿಸಿಯ ಈ ‘ಸರ್ಪ್ರೈಸ್’ ನಡೆ ಗಂಗಾವತಿ ಹಾಗೂ ಕೊಪ್ಪಳ ಜಿಲ್ಲಾ ರಾಜಕಾರಣವನ್ನು ಯಾವ ತಿರುವಿಗೆ ಕೊಂಡೊಯ್ಯಲಿದೆ? ಶ್ರೀನಾಥ್ ಅವರ ಮುಂದಿನ ನಡೆ ಏನು? ಎಂಬುದು ಸದ್ಯಕ್ಕೆ ಕಾದು ನೋಡಬೇಕಾದ ಕುತೂಹಲಕಾರಿ ಸಂಗತಿಯಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.