ತುಂಗಾವಾಣಿ.
ಗಂಗಾವತಿ: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ದಲಿತ ಧೀಮಂತ ನಾಯಕ ಹಾಗೂ ಮಾದಾರ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಎಚ್. ಮುನಿಯಪ್ಪ ಅವರಿಗೆ ‘ಉಪಮುಖ್ಯಮಂತ್ರಿ’ (ಡಿಸಿಎಂ) ಸ್ಥಾನ ಕೊಡಬೇಕು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಮಾದಿಗ ಸಮಾಜದ ಒಕ್ಕೂಟ ಒಕ್ಕೊರಲಿನಿಂದ ಆಗ್ರಹಿಸಿದೆ. ನಗರದಲ್ಲಿ ಹಮ್ಮಿಕೊಂಡಿದ್ದ ಸಮಾಜದ ಪ್ರಮುಖರ ಹಾಗೂ ಹೋರಾಟಗಾರರ ತುರ್ತು ಸಭೆಯಲ್ಲಿ ಈ ಖಡಕ್ ತೀರ್ಮಾನ ಕೈಗೊಳ್ಳಲಾಗಿದ್ದು, ಏಳು ಬಾರಿ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಮುನಿಯಪ್ಪ ಅವರ ಸುದೀರ್ಘ ರಾಜಕೀಯ ಅನುಭವ ಹಾಗೂ ನಿಷ್ಠೆಯನ್ನು ಹೈಕಮಾಂಡ್ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರಿ ರಾಜಕೀಯ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಲಾಗಿದೆ.
ಕೇವಲ ಡಿಸಿಎಂ ಹುದ್ದೆಯಷ್ಟೇ ಅಲ್ಲದೆ, ರಾಜ್ಯದಲ್ಲಿ ಮಾದಿಗ ಸಮಾಜ ಹೊಂದಿರುವ ಜನಸಂಖ್ಯೆ ಮತ್ತು ರಾಜಕೀಯ ಪ್ರಾಬಲ್ಯಕ್ಕೆ ತಕ್ಕಂತೆ ನೂತನ ಸಚಿವ ಸಂಪುಟದಲ್ಲಿ ಸಮಾಜದ ಇತರ ನಾಯಕರಿಗೆ ಕನಿಷ್ಠ ಮೂರು ಪ್ರಮುಖ ಖಾತೆಗಳನ್ನು ನೀಡಿ ಸಚಿವರನ್ನಾಗಿ ಪರಿಗಣಿಸಬೇಕು ಎಂದು ಮುಖಂಡರು ಜಿದ್ದಿಗೆ ಬಿದ್ದಿದ್ದಾರೆ. ದಲಿತ ಸಮುದಾಯದ ಪ್ರಮುಖ ಅಂಗವಾಗಿರುವ ಮಾದಿಗ ಸಮಾಜಕ್ಕೆ ಸಿಗಬೇಕಾದ ನ್ಯಾಯಬದ್ಧ ಪಾಲನ್ನು ಈ ಬಾರಿ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಈ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಮುಖಂಡರಾದ
ದೇವಪ್ಪ ದೇವರು ಮನೆ, ಯು. ಲಕ್ಷ್ಮಣಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಪರಶುರಾಮಪ್ಪ, ಹನುಮಂತಪ್ಪ ಡಗ್ಗಿ, ಬಸವರಾಜ್ ಮೇಗಳಮನಿ, ಸಣ್ಣ ಹನುಮಂತಪ್ಪ ಮರಳಿ, ದೇವಣ್ಣ ಮಾಸ್ಟರ್, ಹುಲಿಗೇಶ ದೇವರು ಮನೆ, ಮಾರೇಶ್ ಮುಸ್ಟೂರು, ಸೋಮನಾಥ ಭಂಡಾರಿ, ಸುಭಾಷ್ ಕಂದುಕುರ್, ಹಾಗೂ ದುರಗೇಶ ದೊಡ್ಡಮನಿ ಸಭೆಯ ಮುಂಚೂಣಿಯಲ್ಲಿದ್ದರು.
ಉಳಿದಂತೆ ಗಂಗಣ್ಣ ಸಿದ್ದಾಪುರ, ಶಿವಪ್ಪ ಮಾದಿಗ, ದುರ್ಗೇಶ ಅಕ್ಕಿರೊಟ್ಟಿ, ವೀರೇಶ್ ಗಾಂಧಿನಗರ, ಭೀಮೇಶ್ ಕಂಬಾರ್, ಬಾಲಪ್ಪ ಕಾಮದೊಡ್ಡಿ, ಯಲ್ಲಪ್ಪ ಕಾರಟಗಿ, ಶೇಖರಪ್ಪ ಬೂದುಗುಂಪ, ಹನುಮಂತಪ್ಪ ಹೊಸಪೇಟೆ, ಶಿವಮೂರ್ತಿ, ಮಲ್ಲೇಶ್ ದೇವರ ಮನೆ, ಶಂಕರ್ ಸಿದ್ದಾಪುರ, ಮಂಜುನಾಥ್, ದೇವಣ್ಣ ಸಂಗಾಪುರ್, ಹುಲಿಗೇಶ್ ಕೊಜ್ಜಿ, ಕೃಷ್ಣ, ಕೃಷ್ಣಮೂರ್ತಿ, ದೇವಣ್ಣ ರಾಂಪುರ್, ರಮೇಶ್ B.P, ಆನಂದ್ ವಕೀಲ, ಯಮನೂರು ಗೋನಾಳ್, ನಿಂಗಪ್ಪ ಡಾಣಾಪುರ್, ನೀಲಪ್ಪ ಡಣಾಪುರ್, ಮಹಾದೇವ ಕಾಟಾಪುರ ಹಾಗೂ ಶಿವಪ್ಪ ಇಳಿಗಿನೂರ ಸೇರಿದಂತೆ ಮೂರೂ ತಾಲೂಕುಗಳ ನೂರಾರು ಪ್ರಮುಖರು, ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಹಾಗೂ ಯುವಕರು ಭಾಗವಹಿಸಿದ್ದರು. ಕೆ.ಎಚ್. ಮುನಿಯಪ್ಪ ಅವರಿಗೆ ಸೂಕ್ತ ಸ್ಥಾನಮಾನ ಸಿಗುವವರೆಗೂ ಹೋರಾಟದ ಹಾದಿ ಬಿಡುವುದಿಲ್ಲ ಎಂದು ಸಭೆಯಲ್ಲಿ ಒಮ್ಮತದಿಂದ ಸಂಕಲ್ಪ ತೊಡಲಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.