Tunganews

ಕೊಪ್ಪಳದ ‘ಕೈ’ ಕಲಿಗಳಿಗೆ ಹರಿಪ್ರಸಾದ್ ತಾಕೀತು! ​ಗಂಗಾವತಿ ಜಾತಕ ನನ್ನಲ್ಲಿದೆ: ಹಸ್ತ ಪಾಳಯಕ್ಕೆ ಹೊಸ ಬಾಸ್ ವಾರ್ನಿಂಗ್! ​ಭಿನ್ನಮತ ಬಿಡಿ, ಇಲ್ಲಾ ಜಾಗ ಖಾಲಿ ಮಾಡಿ: ಕೆಪಿಸಿಸಿ ಖಡಕ್ ಆರ್ಡರ್!

ಕೊಪ್ಪಳದ ‘ಕೈ’ ಕಲಿಗಳಿಗೆ ಹರಿಪ್ರಸಾದ್ ತಾಕೀತು! ​ಗಂಗಾವತಿ ಜಾತಕ ನನ್ನಲ್ಲಿದೆ: ಹಸ್ತ ಪಾಳಯಕ್ಕೆ ಹೊಸ ಬಾಸ್ ವಾರ್ನಿಂಗ್! ​ಭಿನ್ನಮತ ಬಿಡಿ, ಇಲ್ಲಾ ಜಾಗ ಖಾಲಿ ಮಾಡಿ: ಕೆಪಿಸಿಸಿ ಖಡಕ್ ಆರ್ಡರ್!

 

ತುಂಗಾವಾಣಿ ವಿಶೇಷ
ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಾದ್ಯಂತ ತಲೆದೋರಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತವನ್ನು ಮರೆತು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ತುಂಗಾವಾಣಿ ಪತ್ರಿಕೆಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಅಭಿನಂದಿಸಿದ ಬಳಿಕ, ಮಾಜಿ ಸಚಿವರು ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿ ಈ ವಿಷಯ ಹಂಚಿಕೊಂಡರು. "ರಾಜ್ಯ ಕಾಂಗ್ರೆಸ್ ಸಾರಥ್ಯವನ್ನು ಹೈಕಮಾಂಡ್ ನನಗೆ ವಹಿಸಿರುವ ಈ ಅವಧಿಯಲ್ಲಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸಿ, ಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು" ಎಂದು ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಗಂಗಾವತಿ ರಾಜಕೀಯದ ನರನಾಡಿ ಗೊತ್ತಿದೆ!
"ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ರಾಜಕೀಯದ ಸಂಪೂರ್ಣ ಚಿತ್ರಣ ನನಗಿದೆ. ಸ್ಥಳೀಯವಾಗಿ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಖಂಡರೆಲ್ಲರೂ ಒಟ್ಟಾಗಿ ಶ್ರಮಿಸಬೇಕು" ಎಂದು ಹರಿಪ್ರಸಾದ್ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ತಾವೂ ಸಂಪೂರ್ಣ ಸಹಕಾರ ನೀಡುವುದಾಗಿ ಹರಿಪ್ರಸಾದ್ ಅವರಿಗೆ ಭರವಸೆ ನೀಡಿರುವುದಾಗಿ ಮಲ್ಲಿಕಾರ್ಜುನ ನಾಗಪ್ಪ ವಿವರಿಸಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆಗೂಡಿ ನೂತನ ಅಧ್ಯಕ್ಷರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಸರ್ಕಾರದ ಸಾಧನೆಗಳ ಪ್ರಚಾರ ಹಾಗೂ ಸಂಘಟನೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

*ಡಿಕೆಶಿ ಸಿಎಂ ಆದರೂ ಕೊಪ್ಪಳ ಕೈ ಪಾಳಯದಲ್ಲಿ ‘ಸಂಭ್ರಮದ ಕೊರತೆ’! 

ಮುಖಂಡರ ಬಹಿರಂಗ ಆಲಸ್ಯಕ್ಕೆ ಕಾರ್ಯಕರ್ತರ ಬೇಸರ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರೂ, ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಮಾತ್ರ ನಿರೀಕ್ಷಿತ ಸಂಭ್ರಮ ಕಾಣಿಸದೇ ಇರುವುದು ಸಾರ್ವಜನಿಕ ವಲಯ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯಮಟ್ಟದಲ್ಲಿ ಹಸ್ತದ ಪಾಳಯಕ್ಕೆ ದೊಡ್ಡ ಯಶಸ್ಸು ಸಿಕ್ಕಿದ್ದರೂ, ಜಿಲ್ಲೆಯ ಗಂಗಾವತಿ ಹಾಗೂ ಕುಷ್ಟಗಿ ಕ್ಷೇತ್ರಗಳನ್ನು ಹೊರತುಪಡಿಸಿದರೆ ಕನಕಗಿರಿ, ಕೊಪ್ಪಳ ಹಾಗೂ ಯಲಬುರ್ಗಾ ಕ್ಷೇತ್ರಗಳಲ್ಲಿ ಯಾವುದೇ ವಿಜಯೋತ್ಸವದ ಕಳೆ ಇರಲಿಲ್ಲ. ಕನಿಷ್ಠ ಪಕ್ಷ ನೂತನ ಸಿಎಂಗೆ ಶುಭ ಕೋರುವ ಬ್ಯಾನರ್‌ಗಳೂ ಪ್ರಮುಖ ವೃತ್ತಗಳಲ್ಲಿ ಕಾಣಸಿಗಲಿಲ್ಲ.

ಗೆದ್ದವರಲ್ಲಿ ಮೌನ, ಸೋತವರಲ್ಲಿ ಸಂಭ್ರಮ!
ವಿಷಾದದ ಸಂಗತಿಯೆಂದರೆ, ಕಳೆದ 2023ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರು ಗಂಗಾವತಿಯಲ್ಲೂ ಹಾಗೂ ಬಯ್ಯಾಪುರ ಅವರ ಬೆಂಬಲಿಗರು ಕುಷ್ಟಗಿಯಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಆದರೆ, ಜಿಲ್ಲೆಯಲ್ಲಿ ಗೆದ್ದು ಪ್ರಸ್ತುತ ಅಧಿಕಾರದಲ್ಲಿರುವ ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ ಹಾಗೂ ಬಸವರಾಜ ರಾಯರೆಡ್ಡಿ ಅವರ ಕ್ಷೇತ್ರಗಳಲ್ಲಿ ಮಾತ್ರ ಸದ್ದೇ ಇರಲಿಲ್ಲ.

ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ?
ಹಾಲಿ ಶಾಸಕರ ಈ ನೀರಸ ಧೋರಣೆಯ ಹಿಂದೆ ‘ಸಚಿವ ಸ್ಥಾನದ ಮುನಿಸು’ ಅಡಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಶಿವರಾಜ ತಂಗಡಗಿ ಅವರು ಡಿಕೆಶಿ ಸಂಪುಟದಲ್ಲೂ ಮುಂದುವರೆಯಲು ಬಯಸಿದ್ದರೆ, ರಾಘವೇಂದ್ರ ಹಿಟ್ನಾಳ ಹಾಗೂ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ನೂತನ ಸರ್ಕಾರದ ಮೊದಲ ದಿನದ ಸಚಿವರ ಪಟ್ಟಿಯಲ್ಲಿ ಈ ಮೂವರಿಗೂ ಸ್ಥಾನ ಸಿಗದೇ ಇರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಮೂರೂ ಕ್ಷೇತ್ರಗಳಲ್ಲಿ ಆಚರಣೆಯಿಂದ ದೂರ ಉಳಿಯಲಾಯಿತು ಎನ್ನಲಾಗುತ್ತಿದೆ.
ಯಾವಾಗಲೂ ಸಣ್ಣಪುಟ್ಟ ವಿಷಯಗಳಿಗೂ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳ ಮೂಲಕ ಮುಂಚೂಣಿಯಲ್ಲಿರುತ್ತಿದ್ದ ಮಹಿಳಾ ಕಾಂಗ್ರೆಸ್ ಘಟಕವೂ ಈ ಮಹತ್ವದ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದೆ. ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೆ.ಎಂ. ಸೈಯದ್ ಅವರು ಮಾತ್ರ ಉಸ್ತುವಾರಿ ವಹಿಸಿ ಒಂದೆರಡು ಬ್ಯಾನರ್ ಹಾಕಿಸಿದ್ದು ಬಿಟ್ಟರೆ, ಶಾಸಕರು ಹಾಗೂ ಸಂಸದರಿರುವ ಜಿಲ್ಲಾ ಕೇಂದ್ರದಲ್ಲೇ ಸಂಭ್ರಮ ಮಾಯವಾಗಿರುವುದು ನಿಷ್ಠಾವಂತ ಕಾರ್ಯಕರ್ತರಲ್ಲಿ ತೀವ್ರ ಬೇಸರ ಮೂಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೊಪ್ಪಳ ಜಿಲ್ಲೆಯ ಐದೂ ಕ್ಷೇತ್ರಗಳ ಕಾಂಗ್ರೆಸ್ ನಾಯಕರು ‘ಒಂದೊಂದು ದಿಕ್ಕಿಗೆ’ ಮುಖ ಮಾಡಿ ನಿಂತಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಕೇವಲ ಸಂಘಟನಾತ್ಮಕ ಸಮಸ್ಯೆಯಷ್ಟೇ ಅಲ್ಲದೆ, ಗಂಭೀರ ಸಮನ್ವಯದ ಕೊರತೆಯನ್ನೂ ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ನೂತನ ಕೆಪಿಸಿಸಿ ಅಧ್ಯಕ್ಷರ ಒಗ್ಗಟ್ಟಿನ ಕರೆಗೆ ಈ ನಾಯಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize