ತುಂಗಾವಾಣಿ.
ಗಂಗಾವತಿ: ಇಲ್ಲಿನ ತಹಶೀಲ್ದಾರ್ ಕಚೇರಿಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರು ಇನ್ಮುಂದೆ ಕಚೇರಿಗೆ ಬರುವ ಮುನ್ನವೇ ಮನೆಯಿಂದ ನೀರಿನ ಬಾಟಲಿ ತರುವುದು ಕಡ್ಡಾಯ! ಯಾಕಂದರೆ, ಇಲ್ಲಿ ಜನರ ದಾಹ ನೀಗಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕವು, ಇಲಾಖೆಯ ‘ಪರ್ಸನಲ್ ಗೋದಾಮು’ ಆಗಿ ಪರಿವರ್ತನೆಯಾಗಿದೆ.
ಶಿರಸ್ತೆದಾರರ ‘ಅದ್ಭುತ’ ಐಡಿಯಾ!
ಕಚೇರಿಯಲ್ಲಿ ಒಣಗುತ್ತಿರುವ ಸಾರ್ವಜನಿಕರ ಗಂಟಲಿಗಿಂತ ನಿರ್ಜೀವ ಚುನಾವಣಾ ಪೆಟ್ಟಿಗೆಗಳ (ಬಾಕ್ಸ್) ಸುರಕ್ಷತೆಯೇ ಮುಖ್ಯ ಎಂದು ಭಾವಿಸಿದ ಚುನಾವಣೆ ಶಿರಸ್ತೆದಾರ್ ರವಿ ನಾಯಕ್ವಾಡ್ ಅವರು ತಮ್ಮ ‘ಸೃಜನಶೀಲತೆ’ ಮೆರೆದಿದ್ದಾರೆ.
2019-20ರಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿದ್ದ ಅದ್ದೂರಿ ನೀರಿನ ಘಟಕಕ್ಕೆ ಬೀಗ ಜಡಿದು, ಅಲ್ಲಿ ರಾಜಾರೋಷವಾಗಿ ಚುನಾವಣಾ ಬಾಕ್ಸ್‌ಗಳನ್ನು ತಂದು ಕೂರಿಸಿದ್ದಾರೆ.
ಈ ಇಡೀ ಅವ್ಯವಸ್ಥೆಯ ವಿರುದ್ಧ ಈಗ ಸಾರ್ವಜನಿಕರು ಮತ್ತು ಸಾಮಾಜಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರ ಆಸ್ತಿಯನ್ನು ವೈಯಕ್ತಿಕ ಗೋದಾಮು ಮಾಡಿಕೊಂಡಿರುವ ರವಿ ನಾಯಕ್ವಾಡ್ ವಿರುದ್ಧ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣವೇ ಆ ಬಾಕ್ಸ್‌ಗಳನ್ನು ತೆರವುಗೊಳಿಸಿ ಜನರಿಗೆ ನೀರು ಸಿಗುವಂತೆ ಮಾಡಬೇಕು ಎಂದು ಆಡಳಿತ ಮಂಡಳಿಯನ್ನು ನೇರವಾಗಿ ಒತ್ತಾಯಿಸಲಾಗಿದೆ.
ಉತ್ತರ ಸಿಗದ ನಿಗೂಢ ಪ್ರಶ್ನೆಗಳು:
ನೀರಿನ ಘಟಕದಲ್ಲಿದ್ದ ದುಬಾರಿ ಫಿಲ್ಟರ್ ಯಂತ್ರಗಳಿಗೆ ಇದ್ದಕ್ಕಿದ್ದಂತೆ ರೆಕ್ಕೆ ಬಂದು ಹಾರಿಹೋದವೇ?
ಅಥವಾ ಯಾರಾದರೂ ತಮಗೇ ಗೊತ್ತಿಲ್ಲದಂತೆ ಮಾರಿ ‘ಕೈ ಬೆಚ್ಚಗೆ’ ಮಾಡಿಕೊಂಡರಾ?
ಘಟಕದ ಹೆಸರಿನಲ್ಲಿ ಬಂದ ಸಾರ್ವಜನಿಕರ ಅನುದಾನ ಕೊನೆಗೆ ಯಾರ ಜೇಬು ಸೇರಿತು?
ನೂತನ ತಹಶೀಲ್ದಾರರೇ ಗಮನಿಸಿ...
ಸದ್ಯಷ್ಟೇ ಅಧಿಕಾರ ವಹಿಸಿಕೊಂಡು ಜನಮನ್ನಣೆ ಗಳಿಸುತ್ತಿರುವ ನೂತನ ತಹಶೀಲ್ದಾರ್ ವಸಂತಕುಮಾರಿ ಅವರ ಕಣ್ಣೆದುರೇ ಈ ‘ಬಾಕ್ಸ್ ಆಟ’ ನಡೆಯುತ್ತಿದ್ದರೂ ಅವರೇಕೆ ಮೌನವಾಗಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆ. ಹೊಸ ತಹಶೀಲ್ದಾರರು ಈ ನಿಗೂಢ ಕೋಣೆಯ ಬೀಗ ಒಡೆದು, ಶಿರಸ್ತೆದಾರರ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕುತ್ತಾರಾ ಅಥವಾ ಇಡೀ ಕಚೇರಿ ಈ ‘ತಂಪು ಪೆಟ್ಟಿಗೆ’ಯ ರಹಸ್ಯಕ್ಕೆ ಶರಣಾಗುತ್ತಾ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.