ತುಂಗಾವಾಣಿ.
ಗಂಗಾವತಿ: ನಗರದ ನ್ಯಾಯಾಲಯದ ಆವರಣದಲ್ಲಿ ನೂತನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವನ್ನು ಗೌರವನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು ದೀಪ ಬೆಳಗಿಸಿ ಅಧಿಕೃತವಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, "ನೂತನ ನ್ಯಾಯಾಲಯ ಸೇರಿ ಗಂಗಾವತಿಯಲ್ಲಿ ಈಗ ಒಟ್ಟು 5 ಜನ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ 11 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿದ್ದು, ಇಂದಿನ ಈ ಹೊಸ ನ್ಯಾಯಾಲಯದ ಆರಂಭದಿಂದ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಕಾಲಮಿತಿಯಲ್ಲಿ ನ್ಯಾಯ ಸಿಗಲು ತುಂಬಾ ಅನುಕೂಲವಾಗಲಿದೆ," ಎಂದರು.
ಹನುಮಂತನ ಬಾಲದಂತಿದೆ ವಕೀಲರ ಬೇಡಿಕೆ!
ಕಾರ್ಯಕ್ರಮದ ಅಸಲಿ ಹೈಲೈಟ್ ಆಗಿದ್ದು ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ್ ಅವರ ಭಾಷಣ. ಪ್ರಧಾನ ನ್ಯಾಯಾಧೀಶರ ಶ್ರಮಕ್ಕೆ ಥ್ಯಾಂಕ್ಸ್ ಹೇಳುತ್ತಲೇ, ಅವರು ಇಟ್ಟ ಬೇಡಿಕೆಗಳ ಪಟ್ಟಿ ನೋಡಿ ವೇದಿಕೆಯಲ್ಲಿದ್ದವರೇ ಒಂದು ಕ್ಷಣ ಬೆಚ್ಚಿಬಿದ್ದರು!
"ನಾವು ಹನುಮನ ನಾಡಿನವರು. ಹಾಗಾಗಿ ನಮ್ಮ ಬೇಡಿಕೆಗಳೂ ಹನುಮಂತನ ಬಾಲದ ತರಹ ಬೆಳೆಯುತ್ತಲೇ ಇರುತ್ತವೆ" ಎಂದು ಲಾಸ್ಯವಾಗಿ ನುಡಿದ ಅವರು, ಕಾರಟಗಿ ನ್ಯಾಯಾಲಯಕ್ಕೆ ಶಾಶ್ವತ ಜಡ್ಜ್, ಹಳೇ ಕೋರ್ಟ್ ನವೀಕರಣ, ಹೊಸ ವಕೀಲರ ಭವನ ಸೇರಿದಂತೆ ಬೇಡಿಕೆಗಳ ಮಹಾಪೂರವನ್ನೇ ಹರಿಸಿದರು. ಜಡ್ಜ್ ಸಾಹೇಬರು ಕೂಡ ಕಮ್ಮಿ ಇಲ್ಲದಂತೆ, "ಖಂಡಿತ, ಈ ಬಾಲದ ಉದ್ದವನ್ನು ಹೈಕೋರ್ಟ್ ಗಮನಕ್ಕೆ ತಂದು ಶೀಘ್ರದಲ್ಲೇ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ಜಾಣ್ಮೆಯ ಭರವಸೆ ನೀಡಿದರು.
ಇದೇ ವೇಳೆ ನೂತನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆಯಾಗಿ ಆಗಮಿಸಿದ ಶ್ರೀಮತಿ ರೋಷಣಿ ಪಾಟೀಲ್ ಅವರನ್ನು ವಕೀಲರ ಸಂಘದಿಂದ ಸ್ವಾಗತಿಸಲಾಯಿತು.
ಸಮಾರಂಭದಲ್ಲಿ ನ್ಯಾಯಾಧೀಶರಾದ ವೇದಮೂರ್ತಿ ಬಿ.ಎಸ್., ಜಿ.ಬಿ. ಹಳ್ಳಕಾಯಿ, ನಾಗೇಶ್ ಪಾಟೀಲ, ಶ್ರೀಮತಿ ಮೇಘ ಸೋಮಣ್ಣನವರ್, ಪಿಡ್ಲೂಡಿ ಇಂಜಿನಿಯರ್ ಹೇಮಂತ್ ರಾಜ್, ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ್, ಉಪಾಧ್ಯಕ್ಷ ಪ್ರಕಾಶ್ ಕುಸುಬಿ, ಖಜಾಂಚಿ ಪುಷ್ಪ ಶ್ರೀನಿವಾಸ್, ಸರ್ಕಾರಿ ವಕೀಲೆ ಸೈದ ಬಾನು ಹಾಗೂ ಹಿರಿಯ ನ್ಯಾಯವಾದಿಗಳಾದ ಸಿದ್ದನಗೌಡ ಪಾಟೀಲ್, ಹೆಚ್. ಮಹಾಬಲೇಶ್, ವಿ.ಎನ್.ಪಾಟೀಲ್, ಶರಣಪ್ಪ ಸಚ್ಚೆಹೊಲ, ಹನುಮೇಶ ಕುಂಬಾರ, ಶಿವಪ್ಪ ಯಲಬುರ್ಗಿ, ಅಕ್ಕಮಹಾದೇವಿ, ಕವಿತಾ ಸೇರಿದಂತೆ ನೂರಾರು ವಕೀಲರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.