ತುಂಗಾವಾಣಿ.
"ಚುನಾವಣಾ ರಾಜಕೀಯದ ಓನಾಮ ಗೊತ್ತಿಲ್ಲದ ವಯಸ್ಸಲ್ಲೇ ಖಾದಿ ಜುಬ್ಬಾ ತೊಟ್ಟು, ಅಸೆಂಬ್ಲಿ ಮೆಟ್ಟಿಲು ಹತ್ತಿದ ನಮ್ಮ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಅತಿರಥ ಮಹಾರಥ, ಶಾಸಕ ಬಸವರಾಜ್ ರಾಯರೆಡ್ಡಿ ಇದ್ದಾರಲ್ಲ... ಅವರು ಸಡನ್ನಾಗಿ ಒಂದು ದಿನ ನಿದ್ರೆಯಿಂದ ಎದ್ದು, ಕಣ್ಣು ತಿಕ್ಕಿಕೊಂಡು, ಕೈಗೊಂದು ಪೆನ್ನು ತಗೊಂಡು ಕ್ಷೇತ್ರದ ಮುಗ್ದ ರೈತರಿಗೆ ಒಂದು ಪತ್ರ ಬರೆದಿದ್ದಾರೆ ನೋಡಿ! ಆ ಪತ್ರದ ಹೂರಣ ಓದುತ್ತಿದ್ದರೆ ನಗಬೇಕೋ ಅಥವಾ ತಲೆ ಚಚ್ಚಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ.
ಅಷ್ಟಕ್ಕೂ ಆ ಪತ್ರದಲ್ಲಿ ಏನಿದೆ ಗೊತ್ತಾ? ಆ 'ಕಾಮಿಡಿ' ಕಥೆಯನ್ನು ನಾವಿವತ್ತು ಬಿಚ್ಚಿಡಬೇಕಾಗಿದೆ.
ಕೇಂದ್ರದ ಮೇಲೆ ಗೂಬೆ ಕೂರಿಸುವ 'ಮಹಾ ಕಲೆ'!
ರಾಯರೆಡ್ಡಿಯವರ ಪತ್ರದ ಸಾರಾಂಶ ಇಷ್ಟೇ— ಯಲಬುರ್ಗಾ, ರೋಣ, ಕುಷ್ಟಗಿ ಭಾಗದಲ್ಲಿ ಗಾಳಿ ಆಂಜನೇಯನ ತರಹ ವಿಂಡ್ ಮಿಲ್‌ಗಳು ತಿರುಗುತ್ತಿವೆ, ಸೋಲಾರ್ ಪ್ಯಾನಲ್‌ಗಳು ನಳನಳಿಸುತ್ತಿವೆ. ಕಂಪನಿಯವರು ಬಂದು ರೈತರ ಜಮೀನು ಕಿತ್ತುಕೊಳ್ಳುತ್ತಿದ್ದಾರೆ. ಆದರೆ, ಈ ಪುಣ್ಯಾತ್ಮ ಶಾಸಕರು ಏನು ಹೇಳ್ತಾರೆ ಗೊತ್ತಾ?
"ನೋಡಿ ರೈತರೇ, ಇದೆಲ್ಲಾ ಆ ದಿಲ್ಲಿಯಲ್ಲಿ ಕೂತಿರೋ ಕೇಂದ್ರ ಸರ್ಕಾರದ ಸ್ಕೀಮು. ಕಾನೂನು ಮಾಡಿದ್ದೂ ಅವರೇ, ಕಂಪನಿಗಳಿಗೆ ಲೈಸೆನ್ಸ್ ಕೊಟ್ಟಿದ್ದೂ ಅವರೇ. ಇದರಲ್ಲಿ ನಮ್ಮ ರಾಜ್ಯ ಸರ್ಕಾರದ "ಯಾವದೇ ಜವಬ್ದಾರಿ ಇಲ್ಲ" (ಅಂದರೆ ನಾವು ಕೇವಲ ಕೈಕಟ್ಟಿ ತಮಾಷೆ ನೋಡುವ ಪ್ರೇಕ್ಷಕರು ಅಷ್ಟೇ!)."
ಎಂತಹ ಅದ್ಭುತವಾದ ಜಾರಿಕೊಳ್ಳುವ ಕಲೆ ಅಲ್ವಾ? ರಾಜ್ಯದಲ್ಲಿ ಇವರದೇ ಸರ್ಕಾರ ಇದೆ, ಇವರದೇ ಡಿಕೆ ಶಿವಕುಮಾರ್ ಸಿಎಂ ಆಗಿದ್ದಾರೆ, ಇವರದೇ ಪೊಲೀಸ್ ಇಲಾಖೆ ಇದೆ. ಆದರೂ ರಾಯರೆಡ್ಡಿಯವರು ಕೈ ತೊಳೆದುಕೊಂಡು ನಿಲ್ಲುವ ಪರಿಗೆ ಏನೆನ್ನಬೇಕು?
"ನೀವು ಜಮೀನು ಕೊಡಬೇಡಿ... ನಾನು ಪತ್ರ ಬರೀತೀನಿ!"
ಮುಂದೆ ರಾಯರೆಡ್ಡಿ ರೈತರಿಗೆ ಭರ್ಜರಿ ಐಡಿಯಾ ಒಂದನ್ನು ಕೊಡ್ತಾರೆ:
"ಯಾರಾದರೂ ಕಂಪನಿಯವರು ಅಥವಾ ನಮ್ಮದೇ ಪೊಲೀಸ್ ಇಲಾಖೆಯವರು ಬಂದು ಜಮೀನು ಕೊಡಿ ಅಂತ ಕಿರುಕುಳ ನೀಡಿದರೆ, ಯಾವುದೇ ಕಾರಣಕ್ಕೂ ಭೂಮಿ ಕೊಡಬೇಡಿ!" "ಕಿರುಕುಳ ಜಾಸ್ತಿಯಾದರೆ ನಾನು ಅಧಿಕಾರಿಗಳಿಗೆ ನಿಮಗೆ ಸಹಾಯ ಮಾಡಲು ಆಲ್ರೆಡಿ ಇನ್‌ಸ್ಟ್ರಕ್ಷನ್ ಕೊಟ್ಟಿದ್ದೀನಿ."
ವಾಹ್! ರಾಯರೆಡ್ಡಿಯವರೇ, ಪೊಲೀಸ್ ಇಲಾಖೆ ಇರೋದು ನಿಮ್ಮದೇ ಗೃಹ ಸಚಿವರ ಅಡಿಯಲ್ಲಿ. ಆ ಪೊಲೀಸರು ರೈತರಿಗೆ ಕಿರುಕುಳ ನೀಡದಂತೆ ತಡೆಯಲು ವಿಧಾನಸೌಧದಲ್ಲಿ ಕೂತು ಒಂದೇ ಒಂದು ಖಡಕ್ ಆದೇಶ ಹೊರಡಿಸಲು ಯೋಗ್ಯತೆ ಇಲ್ಲದ ನೀವು, ರೈತರಿಗೆ "ಕಿರುಕುಳ ತಡ್ಕೊಳ್ಳಿ, ನಾನು ಅಧಿಕಾರಿಗಳಿಗೆ ಹೇಳ್ತೀನಿ" ಅಂತ ಸಮಾಧಾನ ಮಾಡ್ತೀರಲ್ಲ, ಇದಕ್ಕಿಂತ ದೊಡ್ಡ ಜೋಕ್ ಮತ್ತೊಂದಿದೆಯೇ?
ಕೊನೆಯದಾಗಿ ಒಂದು 'ಸಿಲ್ಲಿ' ಪ್ರಹಸನ!
ಪತ್ರದ ಕ್ಲೈಮ್ಯಾಕ್ಸ್ ಅಂತೂ ಅದ್ಭುತವಾಗಿದೆ. ರಾಯರೆಡ್ಡಿಯವರು ಬರೆಯುತ್ತಾರೆ— "ನಾನು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಈ ಯೋಜನೆಯನ್ನು ಸರ್ಕಾರಿ ಭೂಮಿಯಲ್ಲೇ ಮಾಡಿ ಅಂತ ಒತ್ತಾಯಿಸುತ್ತೇನೆ, ಕಾನೂನು ತಿದ್ದುಪಡಿ ತರಲು ಕೇಳ್ತೇನೆ."
ಅಲ್ರೀ ರಾಯರೆಡ್ಡಿಯವರೇ, ನೀವೇ ಆಡಳಿತ ಪಕ್ಷದ ಹಿರಿಯ ಶಾಸಕರು, ಸರ್ಕಾರದ ಮುಖ್ಯ ಸಲಹೆಗಾರರ ಸ್ಥಾನದಲ್ಲಿದ್ದವರು. ನೀವೇ ಹೋಗಿ ಮುಖ್ಯಮಂತ್ರಿಗಳ ಕಣ್ಣಿಗೆ ಕಣ್ಣಿಟ್ಟು "ಬದಲಾವಣೆ ಮಾಡಿ" ಅಂತ ಆರ್ಡರ್ ಮಾಡಬೇಕಾದ ಜಾಗದಲ್ಲಿ ಕೂತು, ನಿಮ್ಮದೇ ಸರ್ಕಾರಕ್ಕೆ ನೀವೇ "ಪತ್ರ" ಬರೀತೀನಿ ಅಂತ ರೈತರ ಮುಂದೆ ನಾಟಕ ಆಡ್ತೀರಲ್ಲ? ನಿಮ್ಮ ಪತ್ರ ಚಳುವಳಿ ನೋಡಿ ವಿಧಾನಸೌಧದ ಗೋಡೆಗಳೂ ನಗುತ್ತಿರಬಹುದು
ರೈತನ ಮಾತು.
ಆತ್ಮೀಯ ರಾಯರೆಡ್ಡಿಯವರೇ, ರೈತರಿಗೆ ಪತ್ರ ಬರೆಯುವ ಈ 'ಲವ್ ಲೆಟರ್' ರಾಜಕೀಯ ಬಿಟ್ಟುಬಿಡಿ. ಜಮೀನು ಕಳೆದುಕೊಳ್ಳುವ ರೈತನಿಗೆ ಬೇಕಾಗಿರುವುದು ನಿಮ್ಮ ಕಾಗದದ ಪತ್ರವಲ್ಲ, ನಿಮ್ಮ ಕಡೆಯಿಂದ ಸಿಗಬೇಕಾದ ಗಟ್ಟಿಯಾದ ರಕ್ಷಣೆ. ಇನ್ನು ಮುಂದಾದರೂ ಇಂತಹ ಹಾಸ್ಯಾಸ್ಪದ ಪತ್ರಗಳನ್ನು ಬರೆದು ಕ್ಷೇತ್ರದ ಜನರಿಗೆ ಮನರಂಜನೆ ನೀಡುವುದನ್ನು ನಿಲ್ಲಿಸಿ, ನೇರವಾಗಿ ಹೋರಾಟಕ್ಕೆ ಇಳಿಯಿರಿ. ಇಲ್ಲದಿದ್ದರೆ ಜನ ನಿಮ್ಮನ್ನು ಕೇವಲ 'ಲೆಟರ್ ರೈಟರ್' ಅಂತ ಕರೆದಾರು, ಎಚ್ಚರ!?
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.