ತುಂಗಾವಾಣಿ.
ನೋಡಿ ಕೊಪ್ಪಳದ ಜನತೆ, ಪ್ರಜಾಪ್ರಭುತ್ವದ ಬ್ಯೂಟಿಯೇ ಇದು! ಕ್ಷೇತ್ರದ ಜನಪ್ರತಿನಿಧಿಗಳು ಕಾಗದದ ಮೇಲೆ ಪತ್ರಗಳನ್ನು ಬರೆಯುತ್ತಾ ಕಾಲಹರಣ ಮಾಡುತ್ತಿರುವಾಗ, ವ್ಯವಸ್ಥೆಯಲ್ಲೇ ಇರುವ ಅಧಿಕಾರಿಗಳು ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲಾಡಳಿತ ಈಗ ಒಂದು ಅತ್ಯುತ್ತಮ ಉದಾಹರಣೆ ಕೊಟ್ಟಿದೆ. ಆದರೆ, ಈ ಇಡೀ ಆಡಳಿತ ಯಂತ್ರ ನಿದ್ರೆಯಿಂದ ಎದ್ದು ಕೂರಲು ಕಾರಣವಾಗಿದ್ದು ನಿಮ್ಮ ‘ತುಂಗಾವಾಣಿ’ ಪತ್ರಿಕೆ ಬಿತ್ತರಿಸಿದ ಆ ಒಂದು ಖಡಕ್ ವರದಿ!
ಕಳೆದ ಜುಲೈ- 8 ರಂದು ನಿಮ್ಮ ನೆಚ್ಚಿನ ತುಂಗಾವಾಣಿ’ ಪತ್ರಿಕೆಯು, "ದಿಲ್ಲಿ ಕಡೆ ಬೆರಳು ತೋರಿಸಿ ಕೈ ತೊಳೆದುಕೊಂಡ ರಾಯರೆಡ್ಡಿ: ರೈತರಿಗೆ ಬೇಕಿರೋದು ಪತ್ರವಲ್ಲ, ಪೌರುಷ!" ಎಂಬ ತಲೆಬರಹದ ಅಡಿಯಲ್ಲಿ ಒಂದು ಸ್ಪೋಟಕ ವರದಿಯನ್ನು ಪ್ರಕಟಿಸಿತ್ತು. ಯಲಬುರ್ಗಾ ಮತ್ತು ಕುಷ್ಟಗಿ ಭಾಗದ ಮುಗ್ಧ ರೈತರು ಕಾರ್ಪೊರೇಟ್ ಕಂಪನಿಗಳ ಹಾವಳಿಯಿಂದ ತತ್ತರಿಸುತ್ತಿದ್ದರೆ, ನಮ್ಮ ಕ್ಷೇತ್ರದ ಹಿರಿಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆಪ್ತ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿಯವರು "ಇದೆಲ್ಲಾ ದಿಲ್ಲಿ ಸರ್ಕಾರದ ಯೋಜನೆ, ನಮಗೂ ಇದಕ್ಕೂ ಸಂಬಂಧವಿಲ್ಲ, ನಾನು ಪತ್ರ ಬರೆಯುತ್ತೇನೆ"
ಎಂದು ಜಾರಿಕೊಳ್ಳುತ್ತಿದ್ದ ಪರಿಯನ್ನು ‘ತುಂಗಾವಾಣಿ’ ಜಿಲ್ಲೆಯ ಜನರ ಮುಂದೆ ವರದಿ ಬಿತ್ತರಿಸಿತ್ತು. ಈ ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾದ್ಯಂತ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿ, ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.
‘ತುಂಗಾವಾಣಿ’ ವರದಿಯ ಈ ತೀವ್ರ ಪರಿಣಾಮದ ಬೆನ್ನಲ್ಲೇ, ಈಗ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಇಟ್ನಾಳ್ ಅವರ ಒಂದು ಖಡಕ್ ನಿರ್ಧಾರ ಕ್ಷೇತ್ರದ ರೈತರಿಗೆ ಹೊಸ ಭರವಸೆ ಮೂಡಿಸಿದೆ!
ರೈತರ ಕಣ್ಣೀರಿಗೆ ಸಿಕ್ಕಿತು ಅಧಿಕೃತ ವೇದಿಕೆ!
ವರದಿಯ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತ ಕೊಪ್ಪಳ ಜಿಲ್ಲಾಧಿಕಾರಿಗಳು, ಜುಲೈ-9 ರಂದು (ವರದಿ ಬಂದ ಮರುದಿನವೇ!) ಒಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸುಮಾರು 7,000 ಮೆಗಾವ್ಯಾಟ್‌ನ ಇಂಧನ ಯೋಜನೆಗಳಿಂದ ರೈತರ ಭೂಮಿ, ಬೆಳೆ ಮತ್ತು ಭೂ-ಪರಿಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಂದರೆಗಳಾಗುತ್ತಿವೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಶಾಸಕರ ತರಹ ಕೇವಲ ಸಾಂತ್ವನದ ಪತ್ರ ಬರೆದು ಕೈತೊಳೆದುಕೊಳ್ಳದ ಜಿಲ್ಲಾಧಿಕಾರಿಗಳು, ರೈತರ ಹಿತರಕ್ಷಣೆಗಾಗಿ ಮತ್ತು ಅವರ ದೂರುಗಳನ್ನು ಶೀಘ್ರವಾಗಿ ಬಗೆಹರಿಸಲು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಒಂದು ಹೈ-ಪವರ್ ಕಮಿಟಿಯನ್ನೇ ರಚಿಸಿದ್ದಾರೆ! ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ಈ ಸಮಿತಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು (ASP), ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಯಲಬುರ್ಗಾ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರನ್ನು ಸದಸ್ಯರನ್ನಾಗಿ ಮಾಡಲಾಗಿದೆ.
ಪತ್ರಕ್ಕಿಂತ ‘ಪವರ್‌ಫುಲ್’ ಆದೇಶ!
ಇಲ್ಲಿ ಗಮನಿಸಬೇಕಾದ ಅಸಲಿ ಸಂಗತಿ ಇದೆ. ಶಾಸಕರು ತಮ್ಮ ಪತ್ರದಲ್ಲಿ "ಪೊಲೀಸರು ಕಿರುಕುಳ ನೀಡಿದರೆ ಸಹಿಸಬೇಡಿ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಆದರೆ ‘ತುಂಗಾವಾಣಿ’ ಪತ್ರಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರವೆಂಬಂತೆ, ಡಿಸಿ ಸಾಹೇಬ್ರು ಅದೇ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯನ್ನೇ (ASP) ಈ ಸಮಿತಿಯಲ್ಲಿ ಕೂರಿಸಿದ್ದಾರೆ! ಅಂದರೆ, ಇನ್ನು ಮುಂದೆ ಯಾವುದೇ ಖಾಸಗಿ ಕಂಪನಿಗಳು ರೈತರಿಗೆ ಅರ್ಧ ಹಣ ಕೊಟ್ಟು ಮೋಸ ಮಾಡಿ ಪಲಾಯನ ಮಾಡಲು ಹೋದರೆ, ಅಥವಾ ರೈತರಿಗೆ ದೌರ್ಜನ್ಯ ಎಸಗಿದರೆ ಈ ಸಮಿತಿ ನೇರವಾಗಿ ಕಾನೂನು ರೀತ್ಯಾ ಅವರ ಕತ್ತು ಹಿಡಿಯಲಿದೆ.
ಯಲಬುರ್ಗಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಕೇಳುತ್ತಿರುವುದು ಇದನ್ನೇ—
"ನಮ್ಮ ಹಿರಿಯ ಶಾಸಕರು ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಕೂತಿದ್ದಾರೆ. ಅವರೇ ಖುದ್ದಾಗಿ ಇಂತಹದೊಂದು ಅಧಿಕೃತ ತನಿಖಾ ಸಮಿತಿಯನ್ನು ಸರ್ಕಾರದಿಂದ ರಚಿಸಬೇಕಿತ್ತು. ಆದರೆ ಆ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಾಗಿ ಬಂದಿದೆ. ಹಾಗಾದರೆ ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿ ಎಲ್ಲಿದೆ?"
ಕೃಷಿ ಭೂಮಿಯನ್ನು ಇಂತಹ ಯೋಜನೆಗಳಿಗೆ ಬಳಸಲು ಭೂಪರಿವರ್ತನೆ (NA) ಅಗತ್ಯವಿಲ್ಲದಿರುವುದರಿಂದ, ರೈತರು ಮತ್ತು ಕಂಪನಿಗಳ ನಡುವಿನ ವ್ಯವಹಾರ ಖಾಸಗಿಯಾಗಿರುತ್ತದೆ ಎಂಬುದು ನಿಜ. ಆದರೆ, ಮುಗ್ಧ ರೈತರು ಕಾರ್ಪೊರೇಟ್ ಕಂಪನಿಗಳ ಮುಂದೆ ಮೋಸ ಹೋಗುತ್ತಿರುವಾಗ ಸರ್ಕಾರಗಳು ಮೂಕಪ್ರೇಕ್ಷಕನಾಗಲು ಸಾಧ್ಯವಿಲ್ಲ ಎಂಬುದನ್ನು ಈ ಸಮಿತಿ ರಚನೆ ಸಾಬೀತು ಪಡಿಸಬೇಕಿದೆ.
ಆತ್ಮೀಯ ರಾಯರೆಡ್ಡಿಯವರೇ, ನೀವು ರಾಜಕೀಯವಾಗಿ ಅತ್ಯಂತ ಹಿರಿಯರು, ಅನುಭವಿಗಳು. ಆದರೆ ಕ್ಷೇತ್ರಕ್ಕೆ ಈಗ ಬೇಕಿರುವುದು ನಿಮ್ಮ ಕಾಗದದ ಪತ್ರಗಳಲ್ಲ, ಜಿಲ್ಲಾಡಳಿತ ತೋರಿರುವ ಮಾದರಿಯಲ್ಲೇ ರೈತರಿಗೆ ಸಿಗಬೇಕಾದ ಗಟ್ಟಿಯಾದ ಸಾಂಸ್ಥಿಕ ರಕ್ಷಣೆ ಮತ್ತು ಆಡಳಿತಾತ್ಮಕ ತಾಕತ್ತು. ಇನ್ನಾದರೂ ಈ ಪತ್ರ ಬರೆಯುವ ಹಳೇ ಶೈಲಿಯನ್ನು ಬಿಟ್ಟು, ಅಧಿಕಾರಿಗಳ ಮೇಲೆ ಒತ್ತಡ ತಂದು ರೈತರ ಪರವಾಗಿ ನೇರ ಆಕ್ಷನ್‌ಗೆ ಇಳಿಯಿರಿ. ಇಲ್ಲದಿದ್ದರೆ, ಜನ ನಿಮ್ಮ ಅಧಿಕಾರಾವಧಿಯನ್ನು ಕೇವಲ ‘ಕಾಗದದ ಪತ್ರಗಳ ಕಾಲ’ ಎಂದು ನೆನಪಿಟ್ಟುಕೊಳ್ಳಬೇಕಾದೀತು,!?
--ನೈಜ ಸುದ್ದಿಗಾಗಿ ಸದಾ ಓದಿರಿ 🔥'ತುಂಗಾವಾಣಿ’