ತುಂಗಾವಾಣಿ.
ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕೊಪ್ಪಳ ಜಿಲ್ಲೆಯ ಸಚಿವ ಸ್ಥಾನದ ಹಂಚಿಕೆ ಕುರಿತು ತೀವ್ರ ಕುತೂಹಲ ಮೂಡಿಸಿದ್ದ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆಬಿದ್ದಿದೆ. ಜಿಲ್ಲೆಯ ಘಟಾನುಘಟಿ ನಾಯಕರ ನಡುವೆ ಸಮಾಜ ಕಲ್ಯಾಣ ಹಾಗೂ ಪ್ರಮುಖ ಇಲಾಖೆಗಳ ಸಚಿವ ಸ್ಥಾನಕ್ಕಾಗಿ ನಡೆಯುತ್ತಿದ್ದ ತೀವ್ರ ಪೈಪೋಟಿ ಮುಕ್ತಾಯಗೊಂಡಿದ್ದು, 'ತುಂಗಾವಾಣಿ ಪತ್ರಿಕೆ' ಕೊಪ್ಪಳ ಸಚಿವಗಿರಿ ಕಸರತ್ತು: ಮೂವರ ನಡುವೆ ರೇಸ್, ತಂಗಡಗಿಗೆ ಪಟ್ಟ!? ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದ ವಿಶೇಷ ವಿಶ್ಲೇಷಣಾತ್ಮಕ ವರದಿ ಅಕ್ಷರಶಃ ಸತ್ಯವಾಗಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ, ಕೊಪ್ಪಳ ಜಿಲ್ಲೆಗೆ ಒಂದಲ್ಲ... ಎರಡೆರಡು ಸಚಿವ ಸ್ಥಾನಗಳು ಸಿಗುವ ಮೂಲಕ ಜಿಲ್ಲೆಯ ರಾಜಕೀಯ ತೂಕ ಹೆಚ್ಚಾಗಿದೆ.
ಹೈಕಮಾಂಡ್ ಮಾಸ್ಟರ್ ಪ್ಲಾನ್: ಜಿಲ್ಲೆಗೆ ಎರಡು ಸಚಿವ ಸ್ಥಾನ, ಹಿಟ್ನಾಳಗೆ ಕೆಎಂಎಫ್ ಪಟ್ಟ?
ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದ ಸಮೀಕರಣ ಹಾಗೂ ನಾಯಕರ ತಂತ್ರಗಾರಿಕೆಯನ್ನು ಆಧಾರಿಸಿ ಈ ಹಿಂದೆ ಪತ್ರಿಕೆ ಪ್ರಕಟಿಸಿದ್ದ ಮುನ್ಸೂಚನೆಯಂತೆಯೇ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದೆ.
ಶಿವರಾಜ್ ತಂಗಡಗಿಗೆ ಸಚಿವ ಪಟ್ಟ:
ಬೋವಿ ಸಮುದಾಯದ ಏಕೈಕ ಪ್ರತಿನಿಧಿ ಹಾಗೂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಇಬ್ಬರೊಂದಿಗೂ ಸಮಾನ ಅಂತರ ಕಾಯ್ದುಕೊಂಡು ತಟಸ್ಥ " ಚಾಣಾಕ್ಷ " ರಾಜಕಾರಣ ನಡೆಸಿದ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿದುಬಂದಿದೆ. ಜಾತಿ ಸಮೀಕರಣ ಮತ್ತು 'ನ್ಯೂಟ್ರಲ್' ಗೇಮ್ ಪ್ಲಾನ್ ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ರಾಯರೆಡ್ಡಿ ಲಕ್ ಓಪನ್ – ಸಚಿವರಾಗಿ ಬಸವರಾಜ್ ರಾಯರೆಡ್ಡಿ.
ಯಲ್ಬುರ್ಗಾ ಶಾಸಕ, ಹಿರಿಯ ಚಾಣಾಕ್ಷ ನಾಯಕ ಬಸವರಾಜ್ ರಾಯರೆಡ್ಡಿ ಅವರ ಲಕ್ ಕೂಡ ಓಪನ್ ಆಗಿದೆ! ಇವರ ಅಪಾರ ಅನುಭವ, ಸೀನಿಯಾರಿಟಿ ಮತ್ತು ಲಿಂಗಾಯತ ಸಮುದಾಯದ ಪ್ರಬಲ ಪ್ರಾತಿನಿಧ್ಯವನ್ನು ಪರಿಗಣಿಸಿರುವ ಹೈಕಮಾಂಡ್, ಇವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದೆ. ಇದರೊಂದಿಗೆ ಕೊಪ್ಪಳ ಜಿಲ್ಲೆಗೆ ಎರಡೆರಡು ಸಚಿವ ಸ್ಥಾನಗಳು ಲಭಿಸಿದಂತಾಗಿದೆ.
ಹಿಟ್ನಾಳಗೆ ಕೆಎಂಎಫ್ ಅಧ್ಯಕ್ಷತೆಯ ದೊಡ್ಡ ಪಟ್ಟ?:
ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಕುರುಬ ಸಮುದಾಯದ ಕೋಟಾ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಆದರೆ, ಇವರನ್ನು ಸಮಾಧಾನಪಡಿಸಲು ಮತ್ತು ಸೂಕ್ತ ಗೌರವ ನೀಡಲು 'KMF (ಕರ್ನಾಟಕ ಹಾಲು ಮಹಾಮಂಡಳ) ಅಧ್ಯಕ್ಷ' ಸ್ಥಾನವನ್ನು ನೀಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಅಧಿನಾಯಕರು ಹಾಗೂ ಜನತೆಗೆ ಧನ್ಯವಾದ ಅರ್ಪಿಸಿದ ನಾಯಕ:
ಮತ್ತೊಮ್ಮೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಾಯಕರು ಪಕ್ಷದ ಅಧಿನಾಯಕರಿಗೆ ಹಾಗೂ ಕ್ಷೇತ್ರದ ಜನತೆಗೆ ಹೃತ್ತೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
"ಕರ್ನಾಟಕದ ಘನ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ನೀಡಿ, ರಾಜ್ಯದ ಪ್ರಗತಿ ಹಾಗೂ ಜನಸೇವೆಗೆ ಮಹತ್ವದ ಅವಕಾಶ ಕಲ್ಪಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ನಾಡಿನ ಜನಪ್ರಿಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಕನಕಗಿರಿ ಸೇರಿದಂತೆ ಜಿಲ್ಲೆಯ ಸಮಸ್ತ ಮತದಾರ ಬಂಧುಗಳಿಗೆ, ಪ್ರತ್ಯಕ್ಷ-ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಹೃದಯಸ್ಪರ್ಶಿ ಕೃತಜ್ಞತೆಗಳು," ಎಂದು ತಿಳಿಸಲಾಗಿದೆ.
'ಸಮೃದ್ಧ ಕನಕಗಿರಿ, ಸಮಗ್ರ ಕರ್ನಾಟಕ' ಧ್ಯೇಯದೊಂದಿಗೆ ಜಿಲ್ಲೆಯ ಹಾಗೂ ರಾಜ್ಯದ ವಿಕಾಸಕ್ಕೆ ಶ್ರಮಿಸುವುದಾಗಿ ನಾಯಕರು ಪುನರುಚ್ಚರಿಸಿದ್ದಾರೆ ಶಾಸಕ ಶಿವರಾಜ್ ತಂಗಡಗಿ ಯವರು.
ಒಟ್ಟಾರೆ ಜಿಲ್ಲೆಯ ಎಲ್ಲ ಘಟಾನುಘಟಿ ನಾಯಕರನ್ನು ಒಟ್ಟಿಗೆ ಸಂತೈಸುವ ಹೈಕಮಾಂಡ್ನ ಈ ಮಾಸ್ಟರ್ ಪ್ಲಾನ್ ಕೊಪ್ಪಳ ಕಾಂಗ್ರೆಸ್ನಲ್ಲಿ ಹೊಸ ಉತ್ಸಾಹ ತುಂಬಿದ್ದು, ಇಬ್ಬರು ಸಚಿವರು ಹಾಗೂ ಒಬ್ಬರು ಕೆಎಂಎಫ್ ಅಧ್ಯಕ್ಷರನ್ನು ಪಡೆಯುವ ಮೂಲಕ ಕೊಪ್ಪಳ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.