ಕಲಬುರಗಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದ ಆದೇಶ ಬೆನ್ನಲ್ಲೇ ನಗರಸಭೆ ಕಂದಾಯ ಇಲಾಖೆಯಿಂದ ಜಪ್ತಿ ಆಪರೇಷನ್
ನೀಲಕಂಠೇಶ್ವರ ವೃತ್ತದಲ್ಲಿದ್ದ ಸರ್ವೆ ನಂ. 198ರ ಸರ್ಕಾರಿ ಭೂಮಿ ಸುಪರ್ದಿಗೆ
ಸುದೀರ್ಘ ಕಾನೂನು ಸಮರಕ್ಕೆ ಬಿತ್ತು ತೆರೆ; ನಗರಸಭೆಗೆ ಹೋರಾಟದ ಫಲ
ತುಂಗಾವಾಣಿ.
ಗಂಗಾವತಿ: ನಗರದ ಹೃದಯಭಾಗದಲ್ಲಿರುವ ನೀಲಕಂಠೇಶ್ವರ ವೃತ್ತದ ಸಮೀಪ ಕೋಟಿಗಟ್ಟಲೆ ಮೌಲ್ಯದ ಸರ್ಕಾರಿ ಆಸ್ತಿಯನ್ನು ನಗರಸಭೆಯು ಬುಧವಾರ ಅಧಿಕೃತವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಧಾರವಾಡ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, ವಿವಾದಿತ ಜಾಗದಲ್ಲಿದ್ದ ಶಾಲೆ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಹಾಗೂ ಕಾಂಪ್ಲೆಕ್ಸ್ಗೆ ಬೀಗ ಜಡಿದು ಜಪ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಗಂಗಾವತಿ ನಗರದ ಸರ್ವೆ ನಂಬರ್ 198ರ ಸರ್ಕಾರಿ ಜಮೀನಿನಲ್ಲಿ ಸುಮಾರು ದಶಕಗಳಿಂದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ನಡೆಯುತ್ತಿತ್ತು. ಆದರೆ, ಸುಮಾರು 25-30 ವರ್ಷಗಳ ಹಿಂದೆ ನಿಯಮಬಾಹಿರವಾಗಿ ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ, ಸದರಿ ಜಾಗವು ನಗರಸಭೆಗೆ ಸೇರಿದ್ದು ಎಂದು ಪೌರಾಡಳಿತ ಸಂಸ್ಥೆಯು ಧಾರವಾಡ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು.
ಕೋರ್ಟ್ನಲ್ಲಿ ತೀವ್ರ ವಾದ-ಪ್ರತಿವಾದ:
ನ್ಯಾಯಾಲಯದಲ್ಲಿ ಈ ಆಸ್ತಿಗಾಗಿ ತೀವ್ರ ಕಾನೂನು ಹೋರಾಟ ನಡೆಯಿತು. ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದಗಳನ್ನು ಹಾಗೂ ಭದ್ರವಾದ ದಾಖಲೆಗಳನ್ನು ಪರಿಶೀಲಿಸಿದ ಕಲಬುರಗಿಯ ಪ್ರಾದೇಶಿಕ ಆಯುಕ್ತರ ನ್ಯಾಯಾಲಯು ಆಸ್ತಿಯು ನಗರಸಭೆಗೆ ಸೇರಿದ್ದು ಎಂದು ಸ್ಪಷ್ಟ ಆದೇಶ ಹೊರಡಿಸಿತು.
ಆಯುಕ್ತರ ಆದೇಶದ ಪ್ರತಿ ಕೈಸೇರುತ್ತಿದ್ದಂತೆ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ತಹಶೀಲ್ದಾರ್ ಯು. ವಸಂತಕುಮಾರಿ, ಕಂದಾಯ ಅಧಿಕಾರಿ (RO) ಮಹೆಬೂಬು ಪಾಷ, ಪರಿಸರ ಇನ್ಸ್ಪೆಕ್ಟರ್ ನಾಗರಾಜ, ಕಂದಾಯ ನಿರೀಕ್ಷಕ ಮಹೇಶ ದಲಾಲ್ (RI) ಹಾಗೂ ಗ್ರಾಮ ಆಡಳಿತಾಧಿಕಾರಿ (VA) ಅವರನ್ನೊಳಗೊಂಡ ಜಂಟಿ ತಂಡ ಸ್ಥಳಕ್ಕೆ ಭೇಟಿ ನೀಡಿತು. ಈ ವೇಳೆ ಪಬ್ಲಿಕ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ ಮಾಲಿಪಾಟೀಲ್ ಅವರ ಸಮ್ಮುಖದಲ್ಲೇ ಶಾಲಾ ಕಟ್ಟಡ, ಕ್ಲಬ್ ಹಾಗೂ ಕಾಂಪ್ಲೆಕ್ಸ್ಗೆ ಕಾನೂನುಬದ್ಧವಾಗಿ ಬೀಗ ಹಾಕಿ, ಜಪ್ತಿ ನೋಟಿಸ್ ಅಂಟಿಸುವ ಮೂಲಕ ಆಸ್ತಿಯನ್ನು ನಗರಸಭೆಯ ಸುಪರ್ದಿಗೆ ಪಡೆಯಲಾಯಿತು. ಇದರೊಂದಿಗೆ ದಶಕಗಳ ಕಾಲ ನಡೆದ ಆಸ್ತಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.