ತುಂಗಾವಾಣಿ.
ಗಂಗಾವತಿ: ನಗರದ ಇಸ್ಲಾಂಪುರ ನಿವಾಸಿ, ಖುಷಿ ಕೊ-ಆಪ್ ಸೊಸೈಟಿ ಅಧ್ಯಕ್ಷರು ಹಾಗೂ ಬಿಜೆಪಿ ಯುವ ಮುಖಂಡ ಆನಂದ ಅಕ್ಕಿ (45) ಅವರು ನಿಧನರಾಗಿದ್ದಾರೆ.
ಮೃತರು ತಂದೆ ಅಕ್ಕಿ ಕೊಟ್ರಪ್ಪ, ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ.
ವೀರಶೈವ ಸಮಾಜದ ಪ್ರಮುಖ ಮುಖಂಡರಾಗಿದ್ದ ಆನಂದ ಅಕ್ಕಿ ಅವರು ಯಶಸ್ವಿ ವಾಣಿಜ್ಯೋದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಸರ್ವ ಸಮಾಜಗಳ ಜನರೊಂದಿಗೆ ನಿಕಟ ಹಾಗೂ ಪ್ರೀತಿಯ ಬಾಂಧವ್ಯ ಹೊಂದಿದ್ದ ಇವರು ತಮ್ಮ ಸರಳತೆ ಮತ್ತು ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು. ಖುಷಿ ಕೊ-ಆಪ್ ಸೊಸೈಟಿ ಅಧ್ಯಕ್ಷರಾಗಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಪಾರ ಜನಪ್ರಿಯತೆ ಗಳಿಸಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗಂಗಾವತಿ ನಗರದಲ್ಲಿ ಶೋಕದ ಛಾಯೆ ಮೂಡಿದ್ದು, ನಗರದ ವಿವಿಧ ರಂಗಗಳ ಗಣ್ಯರು, ರಾಜಕೀಯ ಧುರೀಣರು, ವೀರಶೈವ ಸಮಾಜದ ಪ್ರಮುಖರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಸಮಾಜ ಸೇವಕ, ಯುವ ನೇತಾರ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಆನಂದ ಅಕ್ಕಿ ಅವರ ಅಕಾಲಿಕ ಅಗಲಿಕೆಗೆ 'ತುಂಗಾವಾಣಿ' ಪತ್ರಿಕೆಯ ಬಳಗವೂ ಕೂಡ ತೀವ್ರ ಸಂತಾಪ ಸೂಚಿಸಿದೆ.