ತುಂಗಾವಾಣಿ.
ಗಂಗಾವತಿ: ಸ್ಥಳೀಯ ಪ್ರಭಾವಿ ನಾಯಕರ ನಡುವಿನ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ಸಚಿವರಾಗಿ ಸರ್ಕಾರದ ಯೋಜನೆಗಳು ಮತ್ತು ಜಿಲ್ಲೆಗೆ ತಂದಿರುವ ಅನುದಾನದ ಬಗ್ಗೆ ಜನರಿಗೆ ಸ್ಪಷ್ಟ ಲೆಕ್ಕ ನೀಡಲಿ" ಎಂದು ಅವರು ಸವಾಲು ಹಾಕಿದ್ದಾರೆ.
ಈ ಕುರಿತು ಆಡಿಯೋ ಬಿಡುಗಡೆ ಮಾಡಿರುವ ಅನ್ಸಾರಿ, "ಮಾಧ್ಯಮಗಳ ಮುಂದೆ ಬರಿ ಮಾತುಗಳಿಂದ ಹೇಳಿದರೆ ಸಾಲದು. ಕೊಪ್ಪಳ ಜಿಲ್ಲೆ ಹಾಗೂ ಕನಕಗಿರಿ ಕ್ಷೇತ್ರಕ್ಕೆ ಎಷ್ಟು ಅನುದಾನ ತರಲಾಗಿದೆ ಮತ್ತು ಏನೇನು ಕೆಲಸಗಳಾಗಿವೆ ಎಂಬುದರ ಸಂಪೂರ್ಣ ಮಾಹಿತಿ ಒಳಗೊಂಡ 'ಬುಕ್‌ಲೆಟ್' ಮುದ್ರಿಸಿ ಪ್ರತಿ ಹಳ್ಳಿ ಹಾಗೂ ವಾರ್ಡ್‌ಗೆ ತಲುಪಿಸುವ ಕೆಲಸ ಮಾಡಬೇಕು" ಎಂದು ಒತ್ತಾಯಿಸಿದರು.
'ಸಿದ್ದರಾಮಯ್ಯ ಪ್ರಚಾರ ತಡೆದು ಮೋಸ ಮಾಡಿದ್ದರು'
"2023ರ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಗಾವತಿಗೆ ಬರುವುದನ್ನು ತಡೆದಿದ್ದೇ ತಂಗಡಗಿ, ರಾಘವೇಂದ್ರ ಹಿಟ್ನಾಳ್ ಹಾಗೂ ಬಸವರಾಜ ರಾಯರೆಡ್ಡಿ ಕಾರ್‌ನಿಂದ ಇಳಿಯುತ್ತಿದ್ದಂತೆಯೇ ಬಸವರಾಜ ರಾಯರೆಡ್ಡಿ ಅವರು ವೇದಿಕೆ ಏರಿ, 'ಸಿದ್ದರಾಮಯ್ಯ ನವರು ಬರುವುದಿಲ್ಲ' ಎಂದು ಮೈಕ್‌ನಲ್ಲಿ ಘೋಷಿಸಿ, ನೆರೆದಿದ್ದ 50-60 ಸಾವಿರ ಜನರಲ್ಲಿ ಅರ್ಧಕ್ಕರ್ಧ ಜನ ಎದ್ದು ಹೋಗುವಂತೆ ಮಾಡಿದರು. ಇದು ಹಸಿ ಸುಳ್ಳು ಮತ್ತು ಮೋಸದ ರಾಜಕಾರಣ" ಎಂದು ಅನ್ಸಾರಿ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಲೀಡ್ ತಂದರೂ ಧನ್ಯವಾದವಿಲ್ಲ: ವಿಧಾನಸಭಾ ಚುನಾವಣೆಯಲ್ಲಿ ಮೋಸ ಮಾಡಿದ ನಾಯಕರೇ ಲೋಕಸಭಾ ಚುನಾವಣೆ ವೇಳೆ ಮನೆಗೆ ಬಂದು 'ಗಂಗಾವತಿಯಲ್ಲಿ ಲೀಡ್ ಕೊಡಿಸಿ ಮಾನ ಉಳಿಸಿ' ಅಣ್ಣ ಎಂದು ರಾತ್ರಿ 3 ಗಂಟೆಗೆ ಕೈಕಾಲು ಮುಗಿದಿದ್ದರು. ಶಾಸಕನಾಗಿ ಇಲ್ಲದಿದ್ದರೂ ಹಗಲು-ರಾತ್ರಿ ಕಷ್ಟಪಟ್ಟು ಗಂಗಾವತಿಯಿಂದ ಕಾಂಗ್ರೆಸ್‌ಗೆ 16,ಸಾವಿರ ಮತಗಳ ಬೃಹತ್ ಲೀಡ್ ಕೊಡಿಸಿದ್ದೇನೆ. ಆದರೆ ಕನಕಗಿರಿಯಲ್ಲಿ ಸಚಿವರಾಗಿದ್ದರೂ ತಂಗಡಗಿ ಗಳಿಸಿದ್ದು ಕೇವಲ 4 ಸಾವಿರ ಲೀಡ್. ಆದರೂ ಕನಿಷ್ಠ ಸೌಜನ್ಯಕ್ಕೂ ಧನ್ಯವಾದ ಹೇಳಿಲ್ಲ.
ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ:
ಗಂಗಾವತಿ ಕ್ಷೇತ್ರದ ಅಧಿಕಾರಿಗಳ ವರ್ಗಾವಣೆಯಲ್ಲಿ ತಂಗಡಗಿ ಅವರು ಹಣ ಪಡೆದು ಹಸ್ತಕ್ಷೇಪ ಮಾಡುತ್ತಿದ್ದಾರೆ. "ಅನ್ಸಾರಿ ಹೇಳಿದ ಕೆಲಸ ಮಾಡಬೇಡಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ.
ಮುಸ್ಲಿಂ ಸಮುದಾಯದ ನಿರ್ಲಕ್ಷ್ಯ:
ಮುಸ್ಲಿಂ ಸಮುದಾಯವನ್ನು ಬರೀ ವೋಟ್ ಬ್ಯಾಂಕ್ ಹಾಗೂ ಗುಲಾಮರಂತೆ ಬಳಸಿಕೊಳ್ಳಲಾಗಿದೆಯೇ ಹೊರತು ಅಭಿವೃದ್ಧಿ ಮಾಡಿಲ್ಲ. ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಸಮುದಾಯಕ್ಕೆ ಏನು ಮಾಡಿದ್ದೀರಿ ಎಂಬುದರ ಲೆಕ್ಕ ನೀಡಲಿ.
ಹೈಕಮಾಂಡ್ ಸರ್ವೇಗೆ ಆಗ್ರಹ:
ಸಚಿವರ ದಬ್ಬಾಳಿಕೆಯಿಂದ ಪಕ್ಷದ ಮರ್ಯಾದೆ ಹಾಳಾಗುತ್ತಿದ್ದು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿಶೇಷ ತಂಡದಿಂದ ಸರ್ವೇ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ.
ದಾಖಲೆ ಸಹಿತ ಬಹಿರಂಗಪಡಿಸುವೆ: "ಬರುವ ದಿನಗಳಲ್ಲಿ ನನ್ನ ಸೋಲಿಗೆ ಕಾರಣರಾದ ಪ್ರತಿಯೊಬ್ಬರ ಹೆಸರು, ಷಡ್ಯಂತ್ರ ಹಾಗೂ ನೀರಾವರಿ ಇಲಾಖೆಯ ಅಕ್ರಮಗಳ ಕುರಿತು 'ಎಪಿಸೋಡ್'ಗಳ ಮೂಲಕ ದಾಖಲೆ ಸಹಿತ ಬಹಿರಂಗಪಡಿಸುತ್ತೇನೆ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ." ಎಂದು
ಇಕ್ಬಾಲ್ ಅನ್ಸಾರಿಯವರು ಗುಡುಗಿದ ಆಡಿಯೋ ತೀವ್ರ ಸಂಚಲನ ಮೂಡಿಸಿದೆ, ಮುಂದಿನ ದಿನಗಳಲ್ಲಿ ಗಂಗಾವತಿಯ ರಾಜಕೀಯ ಕಾವು ಯಾವ ಹಂತಕ್ಕೆ ತಲುಪುತ್ತದೆ ಕಾದು ನೋಡಬೇಕಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.