ತುಂಗಾವಾಣಿ.
ಗಂಗಾವತಿ: ನಗರದ ಆಹಾರ ಇಲಾಖೆಯ ಗೋಡಾನಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪಡಿತರ ಅಕ್ಕಿ ಹರಾಜು ಪ್ರಕ್ರಿಯೆಯು ಅಧಿಕಾರಿಗಳ ಜವಾಬ್ದಾರಿರಹಿತ ನಡವಳಿಕೆ ಹಾಗೂ ಸಾರ್ವಜನಿಕ ಪ್ರಕಟಣೆಯ ಗೊಂದಲಗಳಿಂದಾಗಿ ರದ್ದಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ವಿವಿಧ ಮೂಲೆಗಳಿಂದ 70ಕ್ಕೂ ಹೆಚ್ಚು ಬಿಡ್ಡುದಾರರು ಹರಾಜಿನಲ್ಲಿ ಭಾಗವಹಿಸಲು ಆಗಮಿಸಿದ್ದರು. ಆದರೆ, ಪತ್ರಿಕಾ ಪ್ರಕಟಣೆಯಲ್ಲಿ ನೀಡಿದ್ದ ನಿಯಮ-ಷರತ್ತುಗಳಿಗೂ ಹಾಗೂ ಸ್ಥಳದಲ್ಲಿದ್ದ ನಿಯಮಗಳಿಗೂ ಅಪಾರ ವ್ಯತ್ಯಾಸ ಕಂಡುಬಂದಿದ್ದರಿಂದ ಬಿಡ್ಡುದಾರರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಿಡ್ಡುದಾರರ ಸಮಂಜಸ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೆ ಆಹಾರ ನಿರೀಕ್ಷಕರು ತಡಬಡಾಯಿಸಿದರು.
ಡಿಡಿ ಗೈರು-ಆಡಳಿತಕ್ಕೆ ಮುಜುಗರ:
ಪ್ರಮುಖ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೂ ಆಹಾರ ಇಲಾಖೆಯ ಉಪ ನಿರ್ದೇಶಕ (ಡಿಡಿ) ವಿಶ್ವನಾಥ್ ಸ್ಥಳಕ್ಕೆ ಗೈರಾಗಿದ್ದರು. ಇಲಾಖೆಯ ಉನ್ನತ ಅಧಿಕಾರಿಯಾಗಿ ಜವಾಬ್ದಾರಿಯಿಂದ ನುಣುಚಿಕೊಂಡ ಅವರ ನಡವಳಿಕೆಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇನ್ನೊಂದೆಡೆ, ಹರಾಜು ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲದೆ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಯು. ವಸಂತಕುಮಾರಿ ಅವರ ನಡೆ ಗಂಗಾವತಿ ತಾಲೂಕು ಆಡಳಿತಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಅಧಿಕಾರಿಯ ವಾಗ್ವಾದ - ಕ್ರಮಕ್ಕೆ ಆಗ್ರಹ:
ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಗಿದ್ದ ಕಾರಟಗಿ ಆಹಾರ ನಿರೀಕ್ಷಕ ನವೀನ್ ಮಠದ, ಬಿಡ್ಡುದಾರರ ಜೊತೆ ನೇರವಾಗಿ ವಾಗ್ವಾದಕ್ಕೆ ಇಳಿದು ಉದ್ಧಟತನ ತೋರಿದ್ದಾರೆ. ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರಿದ ಈ ಅಧಿಕಾರಿಯ ಮೇಲೆ ತಕ್ಷಣ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಬಿಡ್ಡುದಾರರು ಒತ್ತಾಯಿಸಿದ್ದಾರೆ.
ಕೊನೆಗೆ ಗೊಂದಲ ಮಿತಿಮೀರಿದಾಗ ತಹಶೀಲ್ದಾರ್ ಯು. ವಸಂತಕುಮಾರಿ ಅವರು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ, ಮುಂದಿನ ದಿನಾಂಕವನ್ನು ಆ ಬಳಿಕ ತಿಳಿಸುವುದಾಗಿ ಹೇಳಿ ಸ್ಥಳದಿಂದ ತೆರಳಿದರು. ದೂರದೂರುಗಳಿಂದ ಬಂದಿದ್ದ ಬಿಡ್ಡುದಾರರಿಗೆ ಇದರಿಂದ ತೀವ್ರ ನಿರಾಸೆಯಾಗಿದ್ದು, ಹರಾಜು ದಿಢೀರ್ ಮುಂದೂಡಿಕೆಯ ಹಿಂದೆ ಅನುಮಾನಗಳು ವ್ಯಕ್ತವಾಗಿವೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.