ತುಂಗಾವಾಣಿ.
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಡುವಿನ ರಾಜಕೀಯ ಜಟಾಪಟಿ ಇದೀಗ ‘ಏಕವಚನ’ದ ಸಮರಕ್ಕೆ ತಿರುಗಿದೆ. ರೆಡ್ಡಿ ವಿರುದ್ಧ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುದೀರ್ಘ ಪೋಸ್ಟ್ ಪ್ರಕಟಿಸಿರುವ ಸಚಿವ ತಂಗಡಗಿ, ಅತ್ಯಂತ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದು, ‘ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ, ಗಂಗಾವತಿಯಲ್ಲಿ ಉಪಚುನಾವಣೆ ಎದುರಿಸೋಣ’ ಎಂದು ನೇರ ಪಂಥಾಹ್ವಾನ ನೀಡಿದ್ದಾರೆ.
‘ಲೇ’ ಎನ್ನಬಲ್ಲೆ, ಆದರೆ ಸಂಸ್ಕಾರ ಅಡ್ಡಬರುತ್ತದೆ:
ತಮ್ಮ ಪೋಸ್ಟ್‌ನಲ್ಲಿ ತೀವ್ರ ಆಕ್ರೋಶ ಹೊರಹಾಕಿರುವ ಸಚಿವರು, ‘ಲೇ... ಜನಾರ್ದನರೆಡ್ಡಿ, ಲೇ ... ಚಂಚಲಗುಡ ಕೈದಿ ನಂ. 697, ಅಲೆ ಲೇ... ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ಎಂದು ನಾನೂ ಲೇ ಅನ್ನಬಲ್ಲೆ. ಘನತೆ, ನಡತೆಯಲ್ಲಿ ಅಲ್ಲದಿದ್ದರೂ ವಯಸ್ಸಿನಲ್ಲಿ ನೀವು ಹಿರಿಯರು. ಜತೆಗೆ ನನ್ನ ಹಿರಿಯರು ಕಲಿಸಿದ ಸಂಸ್ಕಾರದಿಂದಾಗಿ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ’ ಎಂದು ತಿವಿದಿದ್ದಾರೆ.
24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡ್ತೀನಿ:
‘ಯಪ್ಪಾ ಬೊಗಳೆ ದಾಸ, ನಿನಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ನೀಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ನೀನು ‘ಎಸ್’ ಎಂದರೆ ನಾಳೆಯೇ ರಾಜೀನಾಮೆ ನೀಡಲು ಸಿದ್ಧ. ಜನಾದೇಶ ಲೂಟಿಕೋರನಿಗೋ ಅಥವಾ ಜನಸೇವಕನಿಗೋ ಎಂಬುದು ಜನರೇ ತೀರ್ಮಾನಿಸಲಿ’ ಎಂದು ಸವಾಲೆಸೆದಿದ್ದಾರೆ.
ಅಂದು ಬೆಂಬಲದ ಭಿಕ್ಷೆ ಬೇಡಿದ್ದೆ: ‘ನಾನು ಮೊದಲ ಬಾರಿ ಪಕ್ಷೇತರನಾಗಿ ಗೆದ್ದಾಗ ಕಾಲಿಗೆ ಚಪ್ಪಲಿ ಹಾಕಲೂ ಬಿಡದೆ ಕರೆದೊಯ್ದು, ತಮ್ಮುಡು ತಮ್ಮುಡು ಎಂದು ಗೋಗರೆದು ಬೆಂಬಲ ಕೇಳಿದ್ದು ಇದೇ ರೆಡ್ಡಿ. ನಮ್ಮ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿ ಅಣ್ಣ-ತಮ್ಮ ಇಬ್ಬರೂ ಮಂತ್ರಿಗಳಾದಿರಿ. ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ?’ ಎಂದು ತಂಗಡಗಿ ಪ್ರಶ್ನಿಸಿದ್ದಾರೆ.
ಕೃಷ್ಣ ಭಜನೆ ಮಾಡಿದ್ದಕ್ಕೆ ಜೈಲಿಗೆ ಕಳಿಸಿದ್ರಾ?:
‘ಗಣಿ ಲೂಟಿ ಕಳ್ಳ ಎಂದಕೂಡಲೇ ಉರಿದುಬೀಳುವ ನೀನೇನು ಸ್ವಾತಂತ್ರ್ಯ ಹೋರಾಟಕ್ಕೆ ಹೋಗಿದ್ದೆಯಾ? ಗಣಿ ಲೂಟಿಗೆ ಜೈಲಿಗೆ ಹೋಗಿಲ್ಲದಿದ್ದರೆ "ಜಯ ಜನಾರ್ಧನ ಕೃಷ್ಣ ರಾಧಿಕಾಪತೇ" ಎಂದು ಭಜನೆ ಮಾಡಿದ್ದಕ್ಕೆ ಕೃಷ್ಣ ಜನ್ಮಸ್ಥಾನಕ್ಕೆ ಕಳುಹಿಸಿದ್ರಾ?’ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯಸಭಾ ಚುನಾವಣಾ ರಹಸ್ಯ:
‘ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ನೀನು ನನಗೆ ಎಷ್ಟು ಬಾರಿ ಕರೆ ಮಾಡಿದ್ದೆ? ಯಾರಿಗೆ ಮತ ಹಾಕಿದೆ? ತಾಕತ್ತಿದ್ದರೆ ನಿನ್ನ ಕಾಲ್ ಲಿಸ್ಟ್ ಬಹಿರಂಗಪಡಿಸು. ನಿನ್ನ ಪಕ್ಷವಿರೋಧಿ ಬೂಟಾಟಿಕೆ ರಾಜ್ಯದ ಜನರಿಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೇ ತಿಳಿಯಲಿ’ ಎಂದು ಕಿಡಿಕಾರಿದ್ದಾರೆ.
ಬಂಡವಾಳ ಬಯಲು ಮಾಡುವ ಎಚ್ಚರಿಕೆ:
‘ಗಂಗಾವತಿಯಲ್ಲಿ ಡಬಲ್ ಬೆಡ್‌ರೂಂ ಮನೆ, ಸ್ಟೇಡಿಯಂ ನಿರ್ಮಿಸುವುದಾಗಿ ಹೇಳಿ ಜನರಿಗೆ ಪಂಗನಾಮ ಹಾಕಿದ್ದೀಯಾ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದರೆ ನಿನ್ನ ಕತ್ತಲೆ ಲೋಕದ ಕರಾಳ ಮುಖ ಕಳಚಿಬೀಳುತ್ತದೆ, ಹುಷಾರ್!’ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ಬಹಿರಂಗ ಕಾದಾಟ ಕೊಪ್ಪಳ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಜಟಾಪಟಿ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.