ರೆಡ್ಡಿ ವಿರುದ್ಧ ಧ್ವನಿ ಎತ್ತಲು ಹಿಂದೇಟು; ಕಾರ್ಯಕರ್ತರ ಆಕ್ರೋಶ
ತುಂಗಾವಾಣಿ.
ಗಂಗಾವತಿ ವಿಧಾನಸಭಾ ಕ್ಷೇತ್ರದ ರಾಜಕೀಯ ಬದ್ಧವೈರಿಗಳ ನಡುವಿನ ವಾಕ್ಸಮರ ತಾರಕಕ್ಕೇರಿದ್ದರೂ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರವಾಗಿ ಧ್ವನಿ ಎತ್ತಬೇಕಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರು ಜಾಣ ಮೌನಕ್ಕೆ ಶರಣಾಗಿರುವುದು ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಸಾರ್ವಜನಿಕವಾಗಿ ಇಕ್ಬಾಲ್ ಅನ್ಸಾರಿ ವಿರುದ್ಧ ಏಕವಚನ ಹಾಗೂ ಕೀಳುಮಟ್ಟದ ಪದಬಳಕೆ ಮಾಡಿ ವಾಗ್ದಾಳಿ ನಡೆಸುತ್ತಿದ್ದರೂ, ಅನ್ಸಾರಿ ಬೆಂಬಲಿಗರು ಮತ್ತು ಪಕ್ಷದ ಪದಾಧಿಕಾರಿಗಳು ತುಟಿಕ್ ಪಿಟಿಕ್ ಎನ್ನದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಫೋಟೋಗೆ ಮಾತ್ರ ಸೀಮಿತ ನಾಯಕರು:
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಗರಕ್ಕೆ ಆಗಮಿಸಿದರೆ ಸಾಕು, ಅವರ ಹಿಂದೆ-ಮುಂದೆ ಓಡಾಡುತ್ತಾ ಕ್ಯಾಮೆರಾಗೆ ಪೋಸ್ ನೀಡುವ ಮುಖಂಡರು, ಅನ್ಸಾರಿ ಕ್ಷೇತ್ರ ಬಿಟ್ಟು ತೆರಳುತ್ತಿದ್ದಂತೆ ಸಂಪೂರ್ಣ ನಿಷ್ಕ್ರಿಯರಾಗುತ್ತಾರೆ ಎಂಬ ಆರೋಪ ಕೇಳಿಬಂದಿದೆ. "ಸಾಹೇಬ್ರೇ ನೀವು ಇಲ್ಲೇ ಇರಿ" ಎಂದು ಒತ್ತಡ ಹೇರುವ ನಗರದ ಪ್ರಮುಖ ಕೆಲ ಉದ್ಯಮಿಗಳು ಹಾಗೂ ತಮ್ಮನ್ನು ತಾವು " ನಾಯಕ " ಮತ್ತು ‘ಯುವ ನಾಯಕರು’ ಎಂದು ಬಿಂಬಿಸಿಕೊಳ್ಳುವ ಕೆಲವರು, ನಾಯಕನ ತೇಜೋವಧೆಯಾಗುತ್ತಿದ್ದರೂ ಸಾರ್ವಜನಿಕವಾಗಿ ಖಂಡಿಸದೆ ಕೇವಲ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಮಾತ್ರ ರೋಷಾವೇಶ ಪ್ರದರ್ಶಿಸುತ್ತಿದ್ದಾರೆ.
ಪ್ರೆಸ್ ಮೀಟ್‌ಗೂ ಹಿಂದೇಟು:
ಶಾಸಕರ ಆರೋಪಗಳಿಗೆ ಸೂಕ್ತ ದಾಖಲೆಗಳೊಂದಿಗೆ ಪ್ರತ್ಯುತ್ತರ ನೀಡಿ ಪತ್ರಿಕಾಗೋಷ್ಠಿ ನಡೆಸಿ ಎಂದು ಸಾಮಾನ್ಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ದುಂಬಾಲು ಬಿದ್ದರೂ ಸ್ಥಳೀಯ ನಾಯಕರು ಕ್ಯಾರೆ ಎನ್ನುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಪತ್ರಿಕೆಗಳಿಗೆ ಹೆಸರಿಗಷ್ಟೇ ಖಂಡನಾ ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು, ಬೀದಿಗಿಳಿದು ಹೋರಾಟ ಮಾಡುವ ಇಚ್ಛಾಶಕ್ತಿ ತೋರುತ್ತಿಲ್ಲ. ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ಸಾರ್ವಜನಿಕವಾಗಿ ತೊಡೆತಟ್ಟಿ ನಿಂತರೆ ರಾಜಕೀಯವಾಗಿ ಅಥವಾ ವೈಯಕ್ತಿಕವಾಗಿ ಎಲ್ಲಿ ತೊಂದರೆಯಾಗುವುದೋ ಎಂಬ ಭಯ ಈ ನಾಯಕರನ್ನು ಕಾಡುತ್ತಿದೆಯೇ ಎಂಬ ಅನುಮಾನ ಕಾರ್ಯಕರ್ತರ ವಲಯದಲ್ಲಿ ವ್ಯಕ್ತವಾಗಿದೆ.
ಅಧಿಕಾರ ಅನುಭವಿಸಿದವರ ನಿಷ್ಠೆ ಎಲ್ಲಿ?
ಅನ್ಸಾರಿ ಅವರ ಹೆಸರನ್ನು ಮುಂದಿಟ್ಟುಕೊಂಡು ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷ ಸ್ಥಾನ, ಸದಸ್ಯ ಸ್ಥಾನ ನಾಮನಿರ್ದೇಶನ ಹುದ್ದೆಗಳು ಹಾಗೂ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿ ಗುತ್ತಿಗೆಗಳನ್ನು ಗಿಟ್ಟಿಸಿಕೊಂಡ ಮುಖಂಡರು, ನಾಯಕನಿಗೆ ಆಪತ್ತು ಬಂದಾಗ ಕಣ್ಣುಮುಚ್ಚಿ ಕುಳಿತಿದ್ದಾರೆ. ಅಧಿಕಾರ ಮತ್ತು ಲಾಭದ ಹಂಚಿಕೆಗೆ ಮುಗಿಬೀಳುವ ಈ ನಾಯಕರ ಪಡೆ, ಮುಂದೆ ಚುನಾವಣಾ ಅಖಾಡಕ್ಕೆ ಧುಮುಕಿದರೆ ಮತದಾರರು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆತಂಕ ಅನ್ಸಾರಿ ನಿಷ್ಠಾವಂತರನ್ನು ಕಾಡಲಾರಂಭಿಸಿದೆ.
ಕಾರ್ಯಕರ್ತರ ಒಳದನಿ: "ನಾಯಕನ ವಿರುದ್ಧ ನಿರಂತರವಾಗಿ ಹಗುರ ಮಾತುಗಳು ಬರುತ್ತಿದ್ದರೂ, ಪಕ್ಷದ ಪದಾಧಿಕಾರಿಗಳು ಮತ್ತು ನಾಮನಿರ್ದೇಶನಗೊಂಡ ಮುಖಂಡರು ಮೌನ ತಾಳಿರುವುದು ನಾಚಿಕೆಗೇಡು. ಅಧಿಕಾರ ಅನುಭವಿಸಲು ನಾಯಕ ಬೇಕು, ಆದರೆ ಅವರನ್ನು ಸಮರ್ಥಿಸಿಕೊಳ್ಳಲು ಧೈರ್ಯವಿಲ್ಲದ ಇಂತಹ ಮುಖಂಡರನ್ನು ನಂಬಿ ಮುಂದಿನ ದಿನಗಳಲ್ಲಿ ರಾಜಕೀಯ ಮಾಡುವುದು ಕಷ್ಟಸಾಧ್ಯ." ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಒಳದನಿ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.