‘ವಿಧಾನಸೌಧಕ್ಕೆ ನಿನ್ನ ಕಾರಲ್ಲೇ ಬರ್ತೀನಿ, ರಾಜೀನಾಮೆ ಕೊಡ್ತೀಯಾ?’: ತಂಗಡಗಿಗೆ ಜನಾರ್ದನ ರೆಡ್ಡಿ ಮುಖಾಮುಖಿ ಸವಾಲು!
‘ಸ್ವಂತ ಆಸ್ತಿ ಮಾರಿ ಗೆದ್ದವನು ನಾನು, ನೀನು ಕೇವಲ ಮಧ್ಯವರ್ತಿ’: ಪೇಪರ್ ಕಟಿಂಗ್ ಸಮೇತ ಸಚಿವ ಶಿವರಾಜ್ ತಂಗಡಗಿ ತಿರುಗೇಟು
ತುಂಗಾವಾಣಿ.
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಡುವಿನ ವಾಗ್ವಾದ ದಿನದಿಂದ ದಿನಕ್ಕೆ ಸ್ಫೋಟಕ ಸ್ವರೂಪ ಪಡೆದುಕೊಳ್ಳುತ್ತಿದೆ. ಹಳೆಯ ವಿಡಿಯೋ ಹಂಚಿಕೊಂಡು ಸಚಿವರಿಗೆ ನೇರ ರಾಜೀನಾಮೆ ಸವಾಲು ಹಾಕಿದ್ದ ಜನಾರ್ದನ ರೆಡ್ಡಿಗೆ, ಸಚಿವ ತಂಗಡಗಿ ಹಳೆಯ ಪತ್ರಿಕಾ ವರದಿಗಳ ತುಣುಕುಗಳನ್ನು (ಪೇಪರ್ ಕಟಿಂಗ್ಸ್) ಮುಂದಿಟ್ಟು ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.
ಹೆಡ್ಫೋನ್ ಹಾಕ್ಕೊಂಡು ಇನ್ನೊಂದು ಸಲ ಕೇಳಿಸ್ಕೋ: ರೆಡ್ಡಿ ಆಕ್ರೋಶ.
ಕಳೆದ ಜುಲೈನಲ್ಲಿ ನಡೆದ ಕಾಲೇಜು ಸಮಾರಂಭವೊಂದರ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಶಾಸಕ ಜನಾರ್ದನ ರೆಡ್ಡಿ, ‘ಯಾರ ಆಶೀರ್ವಾದ, ಯಾರ ಹಣದಿಂದ ಮೊದಲ ಬಾರಿ ಶಾಸಕನಾಗಿ ಮಂತ್ರಿಯಾದೆ ಎಂಬುದನ್ನು ನಿನ್ನ ಬಾಯಿಂದಲೇ ಒಪ್ಪಿಕೊಂಡಿದ್ದೀಯ. ನೆನಪಿಲ್ಲದಿದ್ದರೆ ಕಿವಿಗೆ ಹೆಡ್ಫೋನ್ ಹಾಕಿಕೊಂಡು ಸ್ಪಷ್ಟವಾಗಿ ಕೇಳಿಸಿಕೋ. ‘ಲೇ ತಮ್ಮ’ ಎನ್ನುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ ಭಾಷೆ. ಗಣಿ ಹಣದಿಂದಲೇ ನೀನು ಅಧಿಕಾರ ಹಿಡಿದದ್ದು’ ಎಂದು ವಾಗ್ದಾಳಿ ನಡೆಸಿದ್ದರು.
ಅಷ್ಟಕ್ಕೇ ನಿಲ್ಲದೆ, ‘ಹೇ ತಂಗಡಗಿ, ನಿನ್ನ ಕಾರಿನಲ್ಲೇ ವಿಧಾನಸೌಧಕ್ಕೆ ಜೊತೆಯಾಗಿ ಬರುತ್ತೇನೆ. ನೀನು ಮಂತ್ರಿ ಹಾಗೂ ಶಾಸಕ ಸ್ಥಾನಕ್ಕೆ, ಜತೆಗೆ ಬಿ. ನಾಗೇಂದ್ರ ಸೇರಿ ಇಡೀ ಬಳ್ಳಾರಿ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಂದು ರಾಜೀನಾಮೆ ಕೊಡಿಸು. ನಿಮ್ಮ ರಾಜೀನಾಮೆ ಅಂಗೀಕಾರವಾದ ಮರುಕ್ಷಣವೇ ನಾನೂ ರಾಜೀನಾಮೆ ನೀಡುತ್ತೇನೆ. ಗಂಗಾವತಿ ಹಾಗೂ ಕನಕಗಿರಿಯ ಚುನಾವಣಾ ಅಖಾಡಕ್ಕೆ ಧುಮುಕೋಣ; ಜನ ಯಾರಿಗೆ ಠೇವಣಿ ಕಸಿದು ಮನೆಗೆ ಕಳಿಸುತ್ತಾರೆ ಎಂದು ಅಲ್ಲಿಯೇ ತೀರ್ಮಾನವಾಗಲಿ’ ಎಂದು ನೇರ ಪಂಥಾಹ್ವಾನ ನೀಡಿದ್ದರು.
ಆಸ್ತಿ ಮಾರಾಟಕ್ಕೆ ನೀನು ಕೇವಲ ಬ್ರೋಕರ್: ತಂಗಡಗಿ ತಿವಿತ
ರೆಡ್ಡಿ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲೇ ಸುದೀರ್ಘ ತಿರುಗೇಟು ನೀಡಿರುವ ಸಚಿವ ಶಿವರಾಜ್ ತಂಗಡಗಿ, ‘ಅಣ್ತಮ್ಮಾ ಜನಾರ್ದನ ರೆಡ್ಡಿ, ನಾನು ಸ್ವಂತ ಆಸ್ತಿ ಮಾರಿ ಚುನಾವಣೆ ಎದುರಿಸಿದವನು. ನಿನ್ನ ಗಣಿ ಹಣದಿಂದ ನಾನು ಗೆದ್ದಿಲ್ಲ. ತುರ್ತು ಸಂದರ್ಭದಲ್ಲಿ ನಿನ್ನ ಆಪ್ತ ಸಹಾಯಕನ ಮೂಲಕ ನನ್ನ ಆಸ್ತಿ ನಗದೀಕರಣಕ್ಕೆ ನೀನು ಕೇವಲ ಮಧ್ಯವರ್ತಿಯಾಗಿ (ಬ್ರೋಕರ್) ನೆರವಾಗಿದ್ದೆ. ಸಾಸಿವೆ ಕಾಳಿನಷ್ಟು ಸಹಾಯವನ್ನೂ ಬೆಟ್ಟದಂತೆ ನೆನೆಯುವ ಗುಣ ನನ್ನದು. ಹೀಗಾಗಿಯೇ ತುಂಬು ಸಭೆಯಲ್ಲಿ ಧನ್ಯವಾದ ಹೇಳಿದ್ದೆ. ಅದನ್ನೇ ತಿರುಚಿ ಈಗ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದೀಯಾ?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ನಾವೇ ಕಾರಣ ಎಂದಿದ್ದೆ:
‘ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನಲ್ಲ, ಭೋವಿ ಸಮಾಜದ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಕಾರಣ ಎಂದು ಹಿಂದೆ ನೀನೇ ಹೇಳಿದ್ದೆ. ನಮ್ಮ ಬೆಂಬಲದ ಭಿಕ್ಷೆಯಿಂದಲೇ ಅಂದು ನೀನು ಹಾಗೂ ನಿನ್ನ ಸಹೋದರ ಮಂತ್ರಿಗಳಾಗಿದ್ದು ಮರೆತುಹೋಯಿತೇ?’ ಎಂದು ಹಳೆಯ ಪತ್ರಿಕಾ ವರದಿಗಳ ಕಟಿಂಗ್ ಹಾಕಿ ತಂಗಡಗಿ ಪ್ರಶ್ನಿಸಿದ್ದಾರೆ.
ಸ್ವಪಕ್ಷಕ್ಕೆ ಬೆನ್ನಿಗೆ ಚೂರಿ: ‘ಕನಕಗಿರಿಯಲ್ಲಿ ನಿಂತಿದ್ದ ಬಿಜೆಪಿ ಅಭ್ಯರ್ಥಿಯನ್ನು ಬಿಟ್ಟು ನನಗೆ ನೆರವಾದೆ ಎಂದರೆ, ಸ್ವಂತ ಪಕ್ಷವನ್ನು ಮುಗಿಸುವ ಖಯಾಲಿ ನಿನಗೆ ಅಂದಿನಿಂದಲೇ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೀಯಾ? ಬಿಎಸ್ವೈಗೆ ಬೆನ್ನಿಗೆ ಚೂರಿ ಹಾಕಿದ, ಸ್ವಂತ ತಮ್ಮನನ್ನೇ ಸೋಲಿಸಿದ ಕೃತಘ್ನ ನೀನು’ ಎಂದು ಸಚಿವರು ಹರಿಹಾಯ್ದಿದ್ದಾರೆ.
ರಾಜ್ಯಸಭೆ ಚುನಾವಣೆ ಗುಟ್ಟು: ‘ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಮತ ನೀಡುವುದಾಗಿ ಎಷ್ಟು ಬಾರಿ ಕರೆ ಮಾಡಿದ್ದೆ? ಗಂಗಾವತಿ ಕ್ಷೇತ್ರಕ್ಕೆ ಅನುದಾನ ತರಲು ಯಾರು ಸಹಾಯ ಮಾಡಿದರು? ನೀನು ನನ್ನ ಋಣದಲ್ಲಿದ್ದೀಯೇ ಹೊರತು ನಾನಲ್ಲ. ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ನೀನು’ ಎಂದು ತಂಗಡಗಿ ಆಕ್ರೋಶ ಹೊರಹಾಕಿದ್ದಾರೆ.
ರಾಜೀನಾಮೆ ಸವಾಲು ಸ್ವೀಕಾರ: ‘ಮಾತಿಗೆ ಮೊದಲು ನಿನ್ನ ಪೊಳ್ಳು ಭಾಷಣ ನಿಲ್ಲಿಸಿ, ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ಪತ್ರ ನೀಡು. ಬೆನ್ನಲ್ಲೇ ನಾನೂ ರಾಜೀನಾಮೆ ಕೊಡುತ್ತೇನೆ. ಉಪಚುನಾವಣಾ ಕಣದಲ್ಲೇ ಗಂಗಾವತಿ-ಕನಕಗಿರಿಯ ಮತದಾರರು ಯಾರಿಗೆ ಠೇವಣಿ ಕಸಿಯುತ್ತಾರೆ ನೋಡೋಣ’ ಎಂದು ಸಚಿವರು ಮರುಸವಾಲು ಎಸೆದಿದ್ದಾರೆ.
ಪರಸ್ಪರ ರಾಜೀನಾಮೆ ಸವಾಲುಗಳು ಹಾಗೂ ಹಳೆಯ ಹಾಗೂ ಬಹಿರಂಗ ಜಟಾಪಟಿಯಿಂದಾಗಿ ಕೊಪ್ಪಳ ಜಿಲ್ಲಾ ರಾಜಕೀಯ ಅಖಾಡ ಧಗಧಗಿಸುತ್ತಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.