ತುಂಗಾವಾಣಿ.
ಗಂಗಾವತಿ: ಸ್ವಪಕ್ಷದ ಸಚಿವರು ಮತ್ತು ಮುಖಂಡರ ರಾಜಕೀಯ ನಡೆಯನ್ನು ಪ್ರಶ್ನಿಸಿದ್ದಕ್ಕಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ಅವರ ಅಪಾರ ಬೆಂಬಲಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಅನ್ಸಾರಿಯವರನ್ನು ಸೋಲಿಸಲು 2023ರ ವಿಧಾನಸಭಾ ಚುನಾವಣೆಯಲ್ಲಿ ಒಳಗೊಳಗೆ ಕೆಲಸ ಮಾಡಿದವರಿಗೆ ಉನ್ನತ ಸ್ಥಾನ ನೀಡಿ, ಪಕ್ಷಕ್ಕಾಗಿ ದುಡಿದ ನಾಯಕನಿಗೆ ನೋಟಿಸ್ ನೀಡಿರುವುದು ಕಾಂಗ್ರೆಸ್ನ ದ್ವಂದ್ವ ನೀತಿ ಎಂದು ಅನ್ಸಾರಿ ಅಭಿಮಾನಿಗಳು ನೇರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ್ರೋಹಿಗಳಿಗೆ ಮಣೆ, ನಿಷ್ಠಾವಂತರಿಗೆ ನೋಟಿಸ್: ಮುಸ್ತಫಾ ಖುರೇಷಿ ಆಕ್ರೋಶ
ಈ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಅನ್ಸಾರಿಯವರ ಆಪ್ತ ಬೆಂಬಲಿಗ ಹಾಗೂ ಯುವ ಮುಖಂಡ ಮುಸ್ತಫಾ ಖುರೇಷಿ, "2018ರಲ್ಲಿ ಬಿಜೆಪಿ ಹಾಗೂ 2023ರಲ್ಲಿ ಕೆಆರ್ಪಿಪಿ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದವರಿಗೆ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಜನರ ಪ್ರೀತಿ-ವಿಶ್ವಾಸ ಗಳಿಸಿರುವ ಅನ್ಸಾರಿಯವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ಅನ್ನು ಸೋಲಿಸಲು ಹೊರಗಿನವರು ಬೇಕಿಲ್ಲ, ಒಳಗಿರುವ ಇಂತಹ ನಾಯಕರೇ ಸಾಕು ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿ" ಎಂದು ಗುಡುಗಿದ್ದಾರೆ.
ಅನ್ಸಾರಿ ಸೋಲಿಗೆ ಸ್ವಪಕ್ಷೀಯ ನಾಯಕರ ಸಂಚು?
ಅನ್ಸಾರಿ ಸೋಲಿನ ಹಿಂದಿನ ಒಳರಾಜಕೀಯವನ್ನು ಬಯಲು ಮಾಡಿದ ಬೆಂಬಲಿಗರು, ಗಂಗಾವತಿಯಲ್ಲಿ ಅನ್ಸಾರಿಯವರು ಗೆದ್ದರೆ ತಮಗೆ ಸಚಿವ ಸ್ಥಾನ ತಪ್ಪಿಹೋಗುತ್ತದೆ ಎಂಬ ಸ್ವಾರ್ಥದಿಂದ ಕೊಪ್ಪಳದ ಹಿಟ್ನಾಳ್ ಕುಟುಂಬ, ಸಚಿವರಾದ ಶಿವರಾಜ ತಂಗಡಗಿ ಮತ್ತು ಬಸವರಾಜ ರಾಯರೆಡ್ಡಿ ಒಳಗೊಳಗೆ ಅನ್ಸಾರಿ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. "ಚುನಾವಣೆ ವೇಳೆ ಜನಾರ್ದನ ರೆಡ್ಡಿ ಪರ ಬಹಿರಂಗ ಪ್ರಚಾರ ಮಾಡಿದವರಿಗೆ ಏಕೆ ಅಂದು ನೋಟಿಸ್ ನೀಡಲಿಲ್ಲ? ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಜನ ಸೇರದಂತೆ ತಡೆದವರು ಯಾರು? ಅನ್ಸಾರಿಯವರನ್ನು ವ್ಯವಸ್ಥಿತವಾಗಿ ಸೋಲಿಸಲು ಯತ್ನಿಸಿದವರ ಮುಖವಾಡ ಈಗ ಕಳಚಿಬಿದ್ದಿದೆ" ಎಂದು ಖುರೇಷಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನ್ಸಾರಿಯದ್ದು ವ್ಯಕ್ತಿತ್ವದ ತಾಕತ್ತು
"2004ರಿಂದ ಇಂದಿನವರೆಗೂ ಇತಿಹಾಸ ಗಮನಿಸಿದರೆ, ಜನ ಮತ ಹಾಕಿರುವುದು ಪಕ್ಷ ನೋಡಿಯಲ್ಲ; ಇಕ್ಬಾಲ್ ಅನ್ಸಾರಿ ಅವರ ನಾಯಕತ್ವ ಮತ್ತು ಜನಪರ ಕಾಳಜಿಯನ್ನು ನೋಡಿ. ಅನ್ಸಾರಿ ಅವರು ಯಾವ ಪಕ್ಷದಲ್ಲಿದ್ದರೂ ಕ್ಷೇತ್ರದ ಜನ ಅವರ ಬೆನ್ನಿಗೆ ನಿಲ್ಲುತ್ತಾರೆ. ಇಂತಹ ಹಿರಿಯ ನಾಯಕನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವವರಿಗೆ ದೇವರು ತಕ್ಕ ಶಾಸ್ತಿ ಮಾಡುತ್ತಾನೆ, ಅವರಿಗೆ ಪಶ್ಚಾತ್ತಾಪ ತಪ್ಪಿದ್ದಲ್ಲ" ಎಂದು ಅನ್ಸಾರಿ ಬಣ ಎಚ್ಚರಿಕೆ ನೀಡಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.