ಸರ್ಕಾರಿ ನಿಯಮ ಗಾಳಿಗೆ ತೂರಿ ಪೂರ್ಣ 'ವಂದೇ ಮಾತರಂ' ಗಾಯನ: ಗಂಗಾವತಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ
ಪ್ರಜಾಸೇವಾ ಸಭೆಯಲ್ಲಿ ಶಾಸಕರ ಸೂಚನೆಗೆ ಮಣಿದ ಅಧಿಕಾರಿಗಳು; ಸರ್ಕಾರದ ಕೆಂಗಣ್ಣು?
ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ತೂಗುಗತ್ತಿ?
ತುಂಗಾವಾಣಿ.
ಗಂಗಾವತಿ: ರಾಜ್ಯ ಸರ್ಕಾರದ ಅಧಿಕೃತ ನಿಯಮ ಮತ್ತು ಶಿಷ್ಟಾಚಾರವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ 'ವಂದೇ ಮಾತರಂ' ಗೀತೆಯ ಪೂರ್ಣ ಚರಣಗಳನ್ನು ಮೊಬೈಲ್ ಮೂಲಕ ನುಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಿಯಮಾವಳಿ ಪಾಲಿಸಬೇಕಾದ ತಾಲೂಕು ಮಟ್ಟದ ಉನ್ನತ ಅಧಿಕಾರಿಗಳೇ ಶಾಸಕರ ಒತ್ತಡಕ್ಕೆ ಮಣಿದು ಸರ್ಕಾರದ ಆದೇಶವನ್ನು ಕಡೆಗಣಿಸಿರುವುದು ಇದೀಗ ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಭಾಗಿಯಾದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತುಕ್ರಮಕ್ಕೆ ಮುಂದಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.
ಆಗಿದ್ದೇನು?
ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ನಾಡಗೀತೆಯ ಜತೆಗೆ ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಆಯ್ದ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಸರ್ಕಾರ ಇತ್ತೀಚೆಗಷ್ಟೇ ಅಧಿಕೃತ ಆದೇಶ ಹೊರಡಿಸಿದೆ. ರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ನಿಗದಿತ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಉಳಿದೆಡೆ ಕಾಲಮಿತಿ ಹಾಗೂ ಶಿಷ್ಟಾಚಾರದ ದೃಷ್ಟಿಯಿಂದ ಎರಡು ಚರಣಗಳ ಗಾಯನಕ್ಕಷ್ಟೇ ಸ್ಪಷ್ಟ ಅವಕಾಶವಿದೆ.
ಶನಿವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ 'ಪ್ರಜಾಸೇವಾ ಆಂದೋಲನ' ಸಭೆಯಲ್ಲಿ ಆರಂಭದಲ್ಲಿ ಆಯೋಜಕರು ಸರ್ಕಾರದ ನಿಯಮದಂತೆಯೇ ಎರಡು ಚರಣಗಳನ್ನು ಹಾಡಿಸಿದ್ದರು. ಆದರೆ, ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸರ್ಕಾರದ ನಿಯಮವನ್ನು ಧಿಕ್ಕರಿಸಿ, ಗೀತೆಯ ಎಲ್ಲ ಚರಣಗಳನ್ನು ಪೂರ್ಣವಾಗಿ ಹಾಡುವಂತೆ ಸೂಚಿಸಿದರು. ಬಳಿಕ ಮೊಬೈಲ್ ಮೂಲಕ ಪೂರ್ಣ ಗೀತೆಯನ್ನು ಧ್ವನಿವರ್ಧಕದಲ್ಲಿ ಪ್ರಸಾರ ಮಾಡಲಾಯಿತು.
ಅಧಿಕಾರಿಗಳ ನಡೆಗೆ ಆಕ್ಷೇಪ
ಸರ್ಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ, ನಗರಸಭೆ ಪೌರಾಯುಕ್ತರು ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳು, ವೇದಿಕೆಯಲ್ಲಿದ್ದ ಶಾಸಕರ ರಾಜಕೀಯ ಪ್ರೇರಿತ ಸೂಚನೆಗೆ ತಲೆಬಾಗಿ ಎದ್ದುನಿಂತು ಗೌರವ ಸಲ್ಲಿಸಿದರು. ನಿಯಮಬಾಹಿರವಾಗಿ ಎರಡನೇ ಬಾರಿಗೆ ಪೂರ್ಣ ಗೀತೆ ಪ್ರಸಾರವಾಗುತ್ತಿದ್ದರೂ ಅದನ್ನು ತಡೆಯದೆ, ಸರ್ಕಾರದ ಆದೇಶವನ್ನು ಉಲ್ಲಂಘಿಸಲು ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ಸಾಥ್ ನೀಡಿದ್ದು ಆಡಳಿತಾತ್ಮಕವಾಗಿ ಗಂಭೀರ ಲೋಪವೆಂದು ಪರಿಗಣಿಸಲಾಗಿದೆ.
ಕ್ರಮದ ತೂಗುಗತ್ತಿ ?
ಸರ್ಕಾರದ ನಡಾವಳಿಗಳನ್ನು ಧಿಕ್ಕರಿಸಿ ನಿಯಮ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟ ಸ್ಥಳೀಯ ಅಧಿಕಾರಿಗಳ ನಡೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ನೋಟಿಸ್ ಜಾರಿ ಸಾಧ್ಯತೆ: ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಸಂಬಂಧಪಟ್ಟ ತಹಸೀಲ್ದಾರ್, ಪೌರಾಯುಕ್ತರು ಹಾಗೂ ಇಒಗೆ ಶಿಷ್ಟಾಚಾರ ಉಲ್ಲಂಘನೆ ಕುರಿತು ಕಾರಣ ಕೇಳಿ ನೋಟಿಸ್ ಜಾರಿಯಾಗುವ ಸಾಧ್ಯತೆಯಿದೆ.
ಇಲಾಖಾ ವಿಚಾರಣೆ: ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ತರಿಸಿಕೊಂಡು, ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರ ಮುಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಸರ್ಕಾರಿ ಸಭೆ-ಸಮಾರಂಭಗಳಲ್ಲಿ ರಾಜಕೀಯ ನಾಯಕರ ನಿಲುವುಗಳಿಗಿಂತ ಸರ್ಕಾರದ ಅಧಿಕೃತ ಸುತ್ತೋಲೆಗಳೇ ಅಂತಿಮ. ಆದರೆ ಗಂಗಾವತಿಯಲ್ಲಿ ಅಧಿಕಾರಿಗಳು ಜವಾಬ್ದಾರಿ ಮರೆತು ನಡೆದುಕೊಂಡಿರುವುದು ಇಡೀ ಜಿಲ್ಲಾ ಆಡಳಿತಕ್ಕೆ ಮುಜುಗರ ತಂದಿಟ್ಟಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.