ಜೆಸ್ಕಾಂ ಅಧಿಕಾರಿಗಳ ವಿರುದ್ಧ ಅಂಬೇಡ್ಕರ್ ನಗರ ನಿವಾಸಿಗಳ ಆಕ್ರೋಶ
ಸ್ಥಳಕ್ಕೆ ಟ್ರಾಫಿಕ್ ಪಿಎಸ್ಐ ಭೇಟಿ, ಸಾರ್ವಜನಿಕರ ಮನವೊಲಿಕೆ
ತುಂಗಾವಾಣಿ.
ಗಂಗಾವತಿ: ಗಣೇಶ ವಿಸರ್ಜನೆ ನೆಪವೊಡ್ಡಿ ಯಾವುದೇ ಮುನ್ಸೂಚನೆ ನೀಡದೆ ಅಕಾರಣವಾಗಿ ದೀರ್ಘಕಾಲ ವಿದ್ಯುತ್ ಕಡಿತಗೊಳಿಸಿದ್ದನ್ನು ಖಂಡಿಸಿ ನಗರದ ಅಂಬೇಡ್ಕರ್ ನಗರದ ನಿವಾಸಿಗಳು ಶನಿವಾರ ರಾತ್ರಿ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಜಂಕ್ಷನ್ ಆಗಿರುವ ಲಕ್ಷ್ಮೀ ಕ್ಯಾಂಪ್, ಗುಂಡಮ್ಮ ಕ್ಯಾಂಪ್ ಹಾಗೂ ಅಂಬೇಡ್ಕರ್ ನಗರ ಕೂಡುವ ಮುಖ್ಯರಸ್ತೆಯಲ್ಲಿ ಜಮಾಯಿಸಿದ ನೂರಾರು ನಿವಾಸಿಗಳು, ಜೆಸ್ಕಾಂ ಅಧಿಕಾರಿಗಳ ಧೋರಣೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದು ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದರಿಂದ ಕೆಲ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಆಕ್ರೋಶಕ್ಕೆ ಕಾರಣವೇನು?:
"ನಮ್ಮ ಬಡಾವಣೆಯಲ್ಲಿ ಇಂದು ಯಾವುದೇ ಗಣೇಶ ಮೂರ್ತಿ ವಿಸರ್ಜನೆ ಇರಲಿಲ್ಲ. ಮೆರವಣಿಗೆ ನಡೆಯುವ ಮಾರ್ಗಗಳಲ್ಲಿ ವಿದ್ಯುತ್ ಕಡಿತಗೊಳಿಸುವುದನ್ನು ಬಿಟ್ಟು, ಸ್ಥಳೀಯ ಲೈನ್ಮ್ಯಾನ್ ಹಾಗೂ ಜೆಇ ಉದ್ದೇಶಪೂರ್ವಕವಾಗಿ ಸಂಜೆ 6 ಗಂಟೆಯಿಂದಲೇ ನಮ್ಮ ಬಡಾವಣೆಯ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ರಾತ್ರಿ 11 ಗಂಟೆಯಾದರೂ ವಿದ್ಯುತ್ ಮರುಸ್ಥಾಪಿಸಿಲ್ಲ" ಎಂದು ಪ್ರತಿಭಟನಾಕಾರರು ದೂರಿದರು.
ಬಡವರ ಬಡಾವಣೆ ಎಂಬ ನಿರ್ಲಕ್ಷ್ಯ:
"ಇದು ಬಡವರು ವಾಸಿಸುವ ಪ್ರದೇಶವೆಂಬ ಕಾರಣಕ್ಕೆ ಜೆಸ್ಕಾಂ ಸಿಬ್ಬಂದಿ ಸದಾ ನಿರ್ಲಕ್ಷ್ಯ ವಹಿಸುತ್ತಾರೆ. ಬಡಾವಣೆಯ ಚರಂಡಿಗಳು ತುಂಬಿ ತುಳುಕುತ್ತಿದ್ದು, ಕರೆಂಟ್ ಇಲ್ಲದೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಕ್ಕಳ ಪರೀಕ್ಷಾ ಸಮಯವಾಗಿದ್ದು ಓದಲು ತೊಂದರೆಯಾಗುತ್ತಿದೆ. ಉಸಿರಾಟದ ಸಮಸ್ಯೆಯುಳ್ಳ ವೃದ್ಧರು ಕತ್ತಲಿನಲ್ಲಿ ನರಳುವಂತಾಗಿದೆ. ಕರ್ತವ್ಯಲೋಪ ಎಸಗಿರುವ ಸಂಬಂಧಪಟ್ಟ ಲೈನ್ಮ್ಯಾನ್ ಹಾಗೂ ಜೆಇ ಅವರನ್ನು ತಕ್ಷಣವೇ ಅಮಾನತು ಮಾಡಿ ಬೇರೆಡೆ ವರ್ಗಾವಣೆ ಮಾಡಬೇಕು" ಎಂದು ನಿವಾಸಿಗಳು ಪಟ್ಟು ಹಿಡಿದರು.
ಪೊಲೀಸರಿಂದ ಪರಿಸ್ಥಿತಿ ತಿಳಿ:
ರಸ್ತೆ ತಡೆ ವಿಷಯ ತಿಳಿದ ತಕ್ಷಣ ನಗರ ಸಂಚಾರ (ಟ್ರಾಫಿಕ್) ಠಾಣೆಯ ಪಿಎಸ್ಐ ಶಾರದಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. "ವಿದ್ಯುತ್ ಪೂರೈಕೆ ಪುನರಾರಂಭಗೊಳ್ಳುವವರೆಗೂ ರಸ್ತೆ ಬಿಟ್ಟು ಕದಲುವುದಿಲ್ಲ" ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ, ಪಿಎಸ್ಐ ಶಾರದಮ್ಮ ಅವರು ಜೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರವೇ ವಿದ್ಯುತ್ ಕಲ್ಪಿಸುವ ಭರವಸೆ ನೀಡಿ ನಿವಾಸಿಗಳ ಮನವೊಲಿಸಿದರು. ಬಳಿಕ ರಸ್ತೆ ಸಂಚಾರ ಸಹಜ ಸ್ಥಿತಿಗೆ ಮರಳಿತು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.