ಪಕ್ಷದ ವಿರುದ್ಧವಲ್ಲ, ನಾಯಕರ ವಿರುದ್ಧವಷ್ಟೇ ನನ್ನ ಅಸಮಾಧಾನ
ಸತ್ಯ ಸದಾ ಒಂಟಿ, ಜನರಿಗಾಗಿ ಹೋರಾಟಕ್ಕೂ ಸಿದ್ಧ: ಮಾಜಿ ಶಾಸಕರ ಗುಡುಗು
ತುಂಗಾವಾಣಿ.
ಗಂಗಾವತಿ / ಕೊಪ್ಪಳ
"ನಾನು ಕಾಂಗ್ರೆಸ್ ಪಕ್ಷದಿಂದ ಎಲ್ಲೂ ದೂರ ಸರಿದಿಲ್ಲ, ಪಕ್ಷದಲ್ಲೇ ಗಟ್ಟಿಯಾಗಿ ಉಳಿದಿದ್ದೇನೆ. ನನ್ನ ಜೆಡಿಎಸ್ ಸೇರ್ಪಡೆ ಕುರಿತು ಹಬ್ಬಿರುವ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ, ಅದೆಲ್ಲವೂ ಕೇವಲ ಗಾಳಿಸುದ್ದಿ" ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಊಹಾಪೋಹದ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾಧ್ಯಮ ಹಾಗೂ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ವದಂತಿಗಳಿಗೆ ತೆರೆ ಎಳೆದರು.
"ಕೊಪ್ಪಳ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದನ್ನು ಕೆಲವರು ದುರುದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿದ್ದಾರೆ. ನಾನು ಕಾಂಗ್ರೆಸ್ ತೊರೆಯಲಿದ್ದೇನೆ ಎಂಬುದು ಸಂಪೂರ್ಣ ಸುಳ್ಳು" ಎಂದು ತಿಳಿಸಿದರು.
ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ
"ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಿರಿಯ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಯಾವುದೇ ಮಹತ್ವದ ರಾಜಕೀಯ ತೀರ್ಮಾನ ಕೈಗೊಳ್ಳುವುದಿದ್ದರೂ ಮೊದಲು ನನ್ನ ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಸಮಾಲೋಚಿಸುತ್ತೇನೆ. ನಾನೇನಿದ್ದರೂ ಕೆಲ ನಾಯಕರ ನಡವಳಿಕೆ ವಿರುದ್ಧ ಧ್ವನಿ ಎತ್ತಿದ್ದೇನೆಯೇ ಹೊರತು ಪಕ್ಷದ ಸಿದ್ಧಾಂತದ ವಿರುದ್ಧವಲ್ಲ" ಎಂದು ಸ್ಪಷ್ಟನೆ ನೀಡಿದರು.
ಸತ್ಯ ಸದಾ ಒಂಟಿ:
ಜಿಲ್ಲೆಯಲ್ಲಿ 'ಕಾಂಗ್ರೆಸ್ ನಾಯಕರು ಒಂದೆಡೆ, ಅನ್ಸಾರಿ ಇನ್ನೊಂದೆಡೆ' ಎಂಬ ಚರ್ಚೆಗೆ ಉತ್ತರಿಸಿದ ಅವರು, "ಸತ್ಯ ಸದಾ ಒಂಟಿಯಾಗಿರುತ್ತದೆ. ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂಬ ದೃಢ ವಿಶ್ವಾಸ ನನಗಿದೆ. ಸಾರ್ವಜನಿಕರ ಹಿತಕ್ಕಾಗಿ ಏಕಾಂಗಿಯಾಗಿಯಾದರೂ ಸರಿ, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸಲು ಹಿಂಜರಿಯುವುದಿಲ್ಲ" ಎಂದರು.
ಅಭಿವೃದ್ಧಿಯೇ ಮುಖ್ಯ ಗುರಿ
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಇನ್ನು 20 ತಿಂಗಳ ಕಾಲಾವಧಿ ಉಳಿದಿದೆ. ಗಂಗಾವತಿ ಹಾಗೂ ಕೊಪ್ಪಳ ಭಾಗದ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವುದು, ಸಚಿವರು ಮತ್ತು ಅಧಿಕಾರಿಗಳ ಮೂಲಕ ಕ್ಷೇತ್ರದ ಜನರಿಗೆ ಅವರ ಕೆಲಸಗಳನ್ನು ಮಾಡುವುದೇ ನನ್ನ ಮೊದಲ ಆದ್ಯತೆ. ರಾಜಕೀಯ ವಿರೋಧಿಗಳು ಸೃಷ್ಟಿಸುತ್ತಿರುವ ಇಂತಹ ಗೊಂದಲಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು" ಎಂದು ಅನ್ಸಾರಿ ಕರೆ ನೀಡಿದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.