ತುಂಗಾವಾಣಿ.
ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯ ಬಾಕಿ ಕೂಲಿ ಹಣ ಬಿಡುಗಡೆ, ಬೆಳೆ ಹಾನಿ ಪರಿಹಾರ ಹೆಚ್ಚಳ ಹಾಗೂ ಹಿರೇಬೆಣಕಲ್ ಕ್ರಾಸ್ ಬಳಿ ಸಾರಿಗೆ ಬಸ್ಗಳ ಕಡ್ಡಾಯ ನಿಲುಗಡೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಮತ್ತು ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ನೂರಾರು ರೈತರು ಹಾಗೂ ಕೂಲಿಕಾರರು ಬೃಹತ್ ರಸ್ತೆ ರೋಖೋ ಚಳವಳಿ ನಡೆಸಿದರು.
ತಾಲೂಕಿನ ಹೊಸಳ್ಳಿ ಕ್ರಾಸ್ ಹಾಗೂ ದಾಸನಾಳ ಬ್ರಿಡ್ಜ್ ಬಳಿ ಹೆದ್ದಾರಿ ತಡೆದು ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ರೈತ ವಿರೋಧಿ ಧೋರಣೆ ಹಾಗೂ ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಹೆಚ್ಚಳಕ್ಕೆ ಆಗ್ರಹ:
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ಮಾತನಾಡಿ, "ರಾಜ್ಯ ಸರ್ಕಾರ ಬರಗಾಲ ಹಾಗೂ ಬೆಳೆ ಪರಿಹಾರವಾಗಿ ಕೇವಲ 2,500 ರೂ. ಘೋಷಣೆ ಮಾಡಿ ರೈತರಿಗೆ ಅನ್ಯಾಯವೆಸಗಿದೆ. ಎಕರೆಗೆ ಕನಿಷ್ಠ 50,000 ರೂ. ಬೆಳೆ ಪರಿಹಾರ ಘೋಷಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕೂಲಿಕಾರರಿಗೆ ತಿಂಗಳುಗಳಿಂದ ಹಣ ಬಿಡುಗಡೆ ಮಾಡದೆ ಸತಾಯಿಸಲಾಗುತ್ತಿದ್ದು, ಗ್ರಾಮೀಣ ಭಾಗದ ಶ್ರಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದು ಕಿಡಿಕಾರಿದರು.
ಬಸ್ ನಿಲುಗಡೆಗೆ ಪಟ್ಟು:
ಹಿರೇಬೆಣಕಲ್ ಕ್ರಾಸ್ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿಕಾರರಿಗೆ ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್ಗಳು ಕಡ್ಡಾಯವಾಗಿ ನಿಲುಗಡೆ ನೀಡಬೇಕು. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಗಡುವು ನೀಡಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು:
ಪ್ರತಿಭಟನಾ ಸ್ಥಳಕ್ಕೆ ಗಂಗಾವತಿ ತಹಶೀಲ್ದಾರ್ ವಿನಾಯಕ ಗೋಡಬಾಲೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಕೆಕೆಆರ್ಟಿಸಿ ಡಿಪೋ ಮ್ಯಾನೇಜರ್, ವೆಂಕಟಗಿರಿ ಪಿಡಿಒ ಕೃಷ್ಣ ಹಾಗೂ ಚಿಕ್ಕಜಂತಕಲ್ ಪಿಡಿಒ ಕಾಸಿನಾಥ್ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಸಮಸ್ಯೆಗಳ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಗಂಗಾವತಿ ಗ್ರಾಮೀಣ ಠಾಣೆ ಪಿಐ ರಂಗಪ್ಪ.ಎಚ್. ದೊಡ್ಡಮನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರೂಪಾದಿ ಬೆಣಕಲ್, ಕೆಪಿಆರ್ಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ಶಿವುಕುಮಾರ್ ಬೆಣಕಲ್, ಎಐಎಡಬ್ಲ್ಯು ಜಿಲ್ಲಾ ಕಾರ್ಯದರ್ಶಿ ಹುಸೇನೆಪ್ಪ, ಬಸವರಾಜ ಆನೆಗುಂದಿ, ಮುತ್ತಣ್ಣ ದಾಸನಾಳ ಸೇರಿದಂತೆ 200ಕ್ಕೂ ಹೆಚ್ಚು ರೈತರು, ಕೂಲಿಕಾರರು ಪಾಲ್ಗೊಂಡಿದ್ದರು.
ನೈಜ ಸುದ್ದಿಗಾಗಿ ತುಂಗಾವಾಣಿ. ಓದಿರಿ.