ತುಂಗಾವಾಣಿ.
ಗಂಗಾವತಿ: ಅಂದು ಕಾಂಗ್ರೆಸ್ ಪಕ್ಷದ್ದೇ ಸಂಪೂರ್ಣ ಪಾರುಪತ್ಯ... ಘಟಾನುಘಟಿ ನಾಯಕರ ಎದುರು ನಿಲ್ಲುವುದಕ್ಕೂ ಎದೆಗಾರಿಕೆ ಬೇಕಿದ್ದ ಕಾಲ. ಅಂತಹ ದಿನಗಳಲ್ಲೇ ರಾಜಕೀಯ ದಿಗ್ಗಜರಿಗೆ ಸೆಡ್ಡು ಹೊಡೆದು, ಕಾಂಗ್ರೆಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿ ಪಕ್ಷೇತರವಾಗಿ ಗೆದ್ದು ಇತಿಹಾಸ ಬರೆದಿದ್ದ ದಿಟ್ಟ ಮಹಿಳಾ ನಾಯಕಿ, ಮಾಜಿ ನಗರಸಭೆ ಸದಸ್ಯೆ ಶ್ರೀಮತಿ ಗೌಸಿಯಾ ಬೇಗಂ ಅವರು ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.
1996ರ ಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಸಂಚಲನ ಸೃಷ್ಟಿಸಿದ್ದ ಗೌಸಿಯಾ ಬೇಗಂ, ಪ್ರಭಾವಿಗಳನ್ನು ಮಣಿಸಿ ನಗರಸಭೆಗೆ ಆಯ್ಕೆಯಾಗಿದ್ದರು. ಇವರ ಗೆಲುವು ಅಂದಿನ ರಾಜಕೀಯ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿತ್ತು. ನಂತರದ ದಿನಗಳಲ್ಲಿ ಜನತಾದಳದ ಪ್ರಮುಖ ಮುಖಂಡ ಗುಂಜಳ್ಳಿ ರಾಜಶೇಖರಪ್ಪ ಸೇರಿದಂತೆ ಘಟಾನುಘಟಿ ನಾಯಕರು ನಗರಸಭೆ ಗದ್ದುಗೆ ಹಿಡಿಯಲು ಇವರ ಬೆಂಬಲ ಕೋರಿ ಬಂದಿದ್ದರು. ರಾಜಕೀಯ ಚದುರಂಗದಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಇವರು, ನಗರಸಭೆಯ ಪ್ರಭಾವಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಇತಿಹಾಸ ನಿರ್ಮಿಸಿದ್ದರು.
ಸ್ಥಳೀಯ ರಾಜಕಾರಣದಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಮಾದರಿಯಾಗಿದ್ದ ಈ ಛಲದ ನಾಯಕಿಯ ಅಗಲಿಕೆಗೆ ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಸೇರಿದಂತೆ ನಗರದ ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 1:00 ಗಂಟೆಗೆ ಬಿಲಾಲ್ ಮಸೀದಿಯ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.