Tunganews

ಕೊಪ್ಪಳ: ಟವರೂ ಇಲ್ಲ, ಪವರೂ ಇಲ್ಲ: ರೀಲ್ಸ್ ನೋಡುತ್ತಾ ಕೂತವನಿಗೆ ಲಕ್ಷ ಲಕ್ಷ ಪಂಗನಾಮ.

ಕೊಪ್ಪಳ: ಟವರೂ ಇಲ್ಲ, ಪವರೂ ಇಲ್ಲ: ರೀಲ್ಸ್ ನೋಡುತ್ತಾ ಕೂತವನಿಗೆ ಲಕ್ಷ ಲಕ್ಷ ಪಂಗನಾಮ.

ತುಂಗಾವಾಣಿ.
ಕೊಪ್ಪಳ: ‘ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದೆಲ್ಲವೂ ಚಿನ್ನವಲ್ಲ, ಕಣ್ಣಿಗೆ ರಾಚುವ ಜಾಹೀರಾತುಗಳೆಲ್ಲ ನಿಜವಲ್ಲ’ ಎಂದು ಪೊಲೀಸರು, ಬ್ಯಾಂಕಿನವರು ದಿನಬೆಳಗಾದರೆ ಮೈಕ್ ಕಟ್ಟಿ ಬಾಯಿ ಬಡಿದುಕೊಂಡರೂ ಜನರಿಗೆ ಆ ಎಚ್ಚರಿಕೆ ತಲುಪುತ್ತಲೇ ಇಲ್ಲ. ಕಾರಣ ಇಷ್ಟೇ—ಕಷ್ಟಪಡದೆ ರಾತ್ರೋರಾತ್ರಿ ಕೋಟ್ಯಧಿಪತಿಯಾಗುವ ಸುಲಭದ ಆಸೆ ಕಣ್ಣಿಗೆ ಪೊರೆ ಕಟ್ಟಿಸಿಬಿಟ್ಟಿರುತ್ತದೆ. ಇಂಥದ್ದೇ ಆನ್‌ಲೈನ್‌ ಖೆಡ್ಡಾಕ್ಕೆ ಬಿದ್ದು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಗುತ್ತೂರು ಗ್ರಾಮದ ಧರಿಯಪ್ಪ ಎಂಬ ಯುವಕ ಬರೋಬ್ಬರಿ ₹6.10 ಲಕ್ಷ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಇನ್‌ಸ್ಟಾಗ್ರಾಂ ಮಾಯಾಲೋಕ ಮತ್ತು ಬಿಎಸ್‌ಎನ್‌ಎಲ್ ಕಥೆ:
ಅಂಗೈಯಲ್ಲೊಂದು ಮೊಬೈಲ್ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್ ಗುಂಗಿನಲ್ಲಿದ್ದ ಧರಿಯಪ್ಪನಿಗೆ ಹಠಾತ್ತನೆ ಒಂದು ಜಾಹೀರಾತು ಎದುರಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ಸರಿಯಾಗಿ ಸಿಗ್ನಲ್ ಸಿಗದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪನಿಯೇ ತನ್ನ ಊರಿಗೆ, ಅದೂ ತನ್ನ ಜಮೀನಿಗೇ ಬಂದು ಟವರ್ ನೆಡುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಜಮೀನು ಬಿಟ್ಟುಕೊಟ್ಟರೆ ಸಾಕು—ಬರೋಬ್ಬರಿ ₹60 ಲಕ್ಷ ಮುಂಗಡ ಹಣ (ಅಡ್ವಾನ್ಸ್) ಮತ್ತು ತಿಂಗಳಿಗೆ ₹50 ಸಾವಿರ ಬಾಡಿಗೆ! ಇಷ್ಟು ದೊಡ್ಡ ಮೊತ್ತ ಕಣ್ಣಮುಂದೆ ತೇಲುತ್ತಿರುವಾಗ ಲಾಜಿಕ್ ಎಲ್ಲಿಂದ ಕೆಲಸ ಮಾಡಬೇಕು? ಧರಿಯಪ್ಪ ತಡಮಾಡದೆ ಜಾಹೀರಾತಿನಲ್ಲಿದ್ದ ಸಂಖ್ಯೆಗೆ ಕರೆ ಗುದ್ದಿದ್ದಾನೆ.

ಹಂತ ಹಂತವಾಗಿ ಹಣ ಪೀಕಳಾಟ:
ಅತ್ತ ಕಡೆಯಿಂದ ಕರೆ ಎತ್ತಿದ ಖದೀಮ ಎಷ್ಟು ನಯವಾಗಿ ಮಾತನಾಡಿದನೆಂದರೆ, ಧರಿಯಪ್ಪನಿಗೆ ತಾನಿನ್ನು ಸಾಕ್ಷಾತ್ ಕುಬೇರನೇ ಆಗಿಬಿಟ್ಟೆ ಎಂಬ ಭ್ರಮೆ ಹುಟ್ಟಿರಬೇಕು. "ಟವರ್ ಬರುವುದು ಖರೆ ಗೌಡ್ರೆ, ಆದರೆ ಅದಕ್ಕೂ ಮುಂಚೆ ಜಿಎಸ್‌ಟಿ ಕಟ್ಟಬೇಕು, ರೋಡ್ ಟ್ಯಾಕ್ಸ್ ಕೊಡಬೇಕು, ಜಾಗದ ವ್ಯಾಲ್ಯುಯೇಷನ್ ಫೀಸ್, ಇನ್ಶೂರೆನ್ಸ್ ಪ್ರೀಮಿಯಂ..." ಎಂದು ಒಂದೊಂದೇ ಕಿಲಾಡಿ ರಾಗ ಎಳೆದಿದ್ದಾನೆ. ಕೈಗೆ ಬರಲಿರುವ ₹60 ಲಕ್ಷದ ಲೆಕ್ಕಾಚಾರದಲ್ಲಿದ್ದ ಧರಿಯಪ್ಪ, ಎದುರಿಗಿರುವ ವ್ಯಕ್ತಿ ಯಾರು, ಊರೇನು ಎಂಬ ಕನಿಷ್ಠ ಪರಿವೆಯೂ ಇಲ್ಲದೆ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹6.10 ಲಕ್ಷ ಹಣವನ್ನು ಸುರಿದಿದ್ದಾನೆ.

ಕಡೆಗೆ ಜ್ಞಾನೋದಯ, ಠಾಣೆ ಮೆಟ್ಟಿಲೇರಿದ ಸಂತ್ರಸ್ತ:
ಖಾತೆಯಲ್ಲಿದ್ದ ದುಡ್ಡೆಲ್ಲ ಖಾಲಿಯಾಗಿ, ಅತ್ತ ಕಡೆಯಿಂದ ಫೋನ್ ಸ್ವಿಚ್ಡ್ ಆಫ್ ಆದ ಮೇಲಷ್ಟೇ ಧರಿಯಪ್ಪನಿಗೆ ಅಸಲಿ ಆಟದ ಅರಿವಾಗಿದೆ—ಅತ್ತ ಟವರೂ ಇಲ್ಲ, ಇತ್ತ ಬಾಡಿಗೆಯೂ ಇಲ್ಲ, ಕೈಯಲ್ಲಿದ್ದ ₹6.10.999- ಲಕ್ಷವೂ ಇಲ್ಲ! ಸದ್ಯ ನೊಂದ ಯುವಕ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಆದರೆ, ಮೋಸ ಮಾಡುವವರು ಮಹಾ ಬುದ್ಧಿವಂತರೇನಲ್ಲ; ಅವರು ಜಸ್ಟ್ ಒಂದು ಸುಳ್ಳಿನ ಬಲೆ ಬೀಸಿ ಕುಳಿತಿರುತ್ತಾರೆ. ಆ ಬಲೆಗೆ ತಾವಾಗಿಯೇ ಹೋಗಿ ತಲೆ ತೂರಿಸುವ ಇಂಥ ‘ಆಸೆಯ ಗಿರಾಕಿಗಳು’ ಇರುವವರೆಗೂ ಸೈಬರ್ ಚೋರರ ಧಂದೆಗೆಂದೂ ಮಂದಿ ಕೊರತೆಯಾಗುವುದಿಲ್ಲ ಎಂಬುದಕ್ಕೆ ಈ ಪ್ರಕರಣವೇ ಜ್ವಲಂತ ಸಾಕ್ಷಿ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize