ತುಂಗಾವಾಣಿ.
ಗಂಗಾವತಿ: ನ್ಯಾಯಾಲಯದ ತಡೆಯಾಜ್ಞೆ ಆದೇಶವಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ತೆರವು ಕಾರ್ಯಾಚರಣೆಗೆ ಮುಂದಾದ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರ (ಎಇಇ) ಅಸ್ಮಾ ಅವರ ಏಕಪಕ್ಷೀಯ ನಡೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗಾಂಧಿನಗರದಲ್ಲಿ ಚರಂಡಿ ಮೇಲಿನ ಕಟ್ಟಡಗಳ ತೆರವು ನೆಪದಲ್ಲಿ ಜೆಸಿಬಿಯೊಂದಿಗೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳೀಯ ನಿವಾಸಿಗಳು ತೀವ್ರ ತರಾಟೆಗೆ ತೆಗೆದುಕೊಂಡು ಕಾರ್ಯಾಚರಣೆಯನ್ನು ತಡೆದು ವಾಪಸ್ ಕಳಿಸಿದ್ದಾರೆ.
ಗಾಂಧಿನಗರದ ಚರಂಡಿ ಮೇಲೆ ಶೌಚಗೃಹ ಸೇರಿದಂತೆ ಕೆಲ ನಿರ್ಮಾಣಗಳಿಂದ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಈ ವಿವಾದ ಸದ್ಯ ನ್ಯಾಯಾಲಯದ ಅಂಗಳದಲ್ಲಿದ್ದು, ಅಧಿಕಾರಿಗಳ ಸಲಹೆಯಂತೆ ಕಟ್ಟಡ ಮಾಲೀಕರು ಕೋರ್ಟ್‌ನಿಂದ ಕಾನೂನುಬದ್ಧವಾಗಿ ತಡೆಯಾಜ್ಞೆ ತಂದಿದ್ದರು. ಅಗತ್ಯ ದಾಖಲೆಗಳನ್ನು ಈಗಾಗಲೇ ನಗರಸಭೆಗೂ ಸಲ್ಲಿಸಲಾಗಿತ್ತು.
ದಾಖಲೆ ಪರಿಶೀಲಿಸದೆ ದರ್ಪ ತೋರಿದ ಆರೋಪ:
ಕೋರ್ಟ್ ಆದೇಶ ಹಾಗೂ ದಾಖಲೆಗಳಿದ್ದರೂ ಎಇಇ ಅಸ್ಮಾ ಅವರು ವಸ್ತುಸ್ಥಿತಿ ಪರಿಶೀಲಿಸದೆ, ಪೂರ್ವಾಗ್ರಹ ಪೀಡಿತರಾಗಿ ಜೆಸಿಬಿ ಸಮೇತ ಕಾರ್ಯಾಚರಣೆಗೆ ನಿಂತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ತಡೆದ ನಿವಾಸಿಗಳು, "ಕೋರ್ಟ್ ತಡೆಯಾಜ್ಞೆ ಪ್ರತಿ ನೀಡಿದ್ದರೂ ಕನಿಷ್ಠ ಪರಿಶೀಲನೆ ನಡೆಸುವ ಸೌಜನ್ಯ ತೋರದೆ ದರ್ಪ ಮೆರೆಯಲು ಬಂದಿದ್ದೇಕೆ?" ಎಂದು ಎಇಇ ಅಸ್ಮಾ ಹಾಗೂ ಆರೋಗ್ಯ ನಿರೀಕ್ಷಕ ಎ. ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪರಿಸರ ಎಂಜಿನಿಯರ್ ಶರಣಪ್ಪ ಅವರು ಲೋಕಾಯುಕ್ತ ಆದೇಶದ ಪ್ರತಿ ತೋರಿಸಲು ಯತ್ನಿಸಿದರೂ, ಅಧಿಕಾರಿಗಳ ಪಕ್ಷಪಾತಿ ಧೋರಣೆಗೆ ಜನ ಕ್ಯಾರೆ ಎನ್ನಲಿಲ್ಲ.
ಪ್ರಭಾವಿಗಳನ್ನು ಬಿಟ್ಟು ಬಡವರ ಮೇಲೆ ಪ್ರತಾಪವೇ?
ನಗರದಾದ್ಯಂತ ರಾಜಾರೋಷವಾಗಿ ನೂರಾರು ವಾಣಿಜ್ಯ ಮಳಿಗೆಗಳು, ಪ್ರಭಾವಿಗಳ ಕಟ್ಟಡಗಳು ಚರಂಡಿ ಹಾಗೂ ಫುಟ್‌ಪಾತ್‌ಗಳನ್ನು ಕಬಳಿಸಿವೆ. ಅವುಗಳ ತಂಟೆಗೆ ಹೋಗದ ಎಇಇ ಅಸ್ಮಾ ಅವರು, ನ್ಯಾಯಾಲಯದ ಆದೇಶವಿರುವ ಬಡವರ ಆಸ್ತಿಗಳ ಮೇಲೆ ಜೆಸಿಬಿ ಹತ್ತಿಸಲು ಉತ್ಸಾಹ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ನಗರದಲ್ಲಿರುವ ಎಲ್ಲ ಅಕ್ರಮ ಒತ್ತುವರಿಗಳನ್ನು ಮೊದಲು ತೆರವುಗೊಳಿಸಿ, ನಂತರ ಇಲ್ಲಿಗೆ ಬನ್ನಿ ಎಂದು ಜನ ಪಟ್ಟುಹಿಡಿದಿದ್ದರಿಂದ ಅಧಿಕಾರಿಗಳು ತೆರವು ಮಾಡಲಾಗದೆ ಮುಖಭಂಗ ಅನುಭವಿಸಿ ಹಿಂದಿರುಗಬೇಕಾಯಿತು.
"ಪ್ರಸ್ತುತ ಕಟ್ಟಡವನ್ನು ಈ ಹಿಂದೆ ನಗರಸಭೆ ಅನುದಾನದಲ್ಲೇ ನಿರ್ಮಿಸಲಾಗಿದೆ. ಈ ಕುರಿತು ಕೋರ್ಟ್‌ನಿಂದ ತಡೆಯಾಜ್ಞೆಯನ್ನೂ ತರಲಾಗಿದೆ. ಅಧಿಕಾರಿಗಳು ಕನಿಷ್ಠ ದಾಖಲೆಗಳನ್ನು ಪರಿಶೀಲಿಸುವ ವ್ಯವಧಾನ ತೋರದೆ, ಏಕಾಏಕಿ ದಬ್ಬಾಳಿಕೆ ರೀತಿಯಲ್ಲಿ ತೆರವಿಗೆ ಮುಂದಾಗಿರುವುದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ."
— ಯು. ಲಕ್ಷ್ಮಣ, ಸ್ಥಳೀಯ ನಿವಾಸಿ