ತುಂಗಾವಾಣಿ.
ಕಾರಟಗಿ: ತಾಲೂಕು ಕೇಂದ್ರವಾಗಿ ದಶಕಗಳೇ ಉರುಳಿದರೂ ಅಗತ್ಯ ಮೂಲಸೌಕರ್ಯ ಹಾಗೂ ಕಚೇರಿಗಳಿಂದ ವಂಚಿತವಾಗಿದ್ದ ಕಾರಟಗಿಗೆ ಈಗ ಹೊಸ ರೂಪ ನೀಡುವ ಕಾಯಕ ಶುರುವಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಮುತುವರ್ಜಿಯಿಂದ ಪಟ್ಟಣದಲ್ಲಿ ಬರೋಬ್ಬರಿ 60 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಆಸ್ಪತ್ರೆ, ಪ್ರಜಾಸೌಧ ಹಾಗೂ ಬಸ್ ಡಿಪೋ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ. ಆದರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಈ ಮಹತ್ವದ ಶಾಶ್ವತ ಕಟ್ಟಡಗಳಿಗೆ ಬಳಸುತ್ತಿರುವ ಮರಳಿನ ಗುಣಮಟ್ಟವೇ ಈಗ ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಕಾಮಗಾರಿಗಳಿಗೆ ನವಲಿ ಭಾಗದಿಂದ ತರಲಾಗುತ್ತಿರುವ ಕಳಪೆ ಮಣ್ಣು ಮಿಶ್ರಿತ ‘ಫಿಲ್ಟರ್ ಮರಳು’ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮರಳಿನ ಮೂಲ, ಅಧಿಕೃತ ರವಾನೆ ಪರವಾನಗಿ ಹಾಗೂ ಗುಣಮಟ್ಟ ಪರೀಕ್ಷೆಯ ಯಾವುದೇ ತಾಂತ್ರಿಕ ದಾಖಲೆಗಳು ಸ್ಪಷ್ಟವಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
60 ಕೋಟಿ ಕಾಮಗಾರಿ; ಲೆಕ್ಕಪತ್ರ ಸರಿ, ಗುಣಮಟ್ಟ ಎಲ್ಲಿ?
ಪಟ್ಟಣದ ಚಳ್ಳೂರು ರಸ್ತೆಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆ ಆಸ್ಪತ್ರೆಗೆ 38 ಕೋಟಿ ರೂ., ಪ್ರಜಾಸೌಧ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೆಕೆಆರ್‌ಡಿಬಿ ಅನುದಾನ ಸೇರಿ 16 ಕೋಟಿ ರೂ. ಹಾಗೂ ಸಂತೆ ಬಜಾರ್ ಬಳಿಯ ಬಸ್ ಡಿಪೋಗೆ 6 ಕೋಟಿ ರೂ. ಸೇರಿ ಒಟ್ಟು 60 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಇಷ್ಟೊಂದು ಬೃಹತ್ ಮೊತ್ತದ ಕಾಮಗಾರಿಗೆ ಪೂರೈಕೆಯಾಗುತ್ತಿರುವ ಮರಳಿನ ಮೂಲ ಯಾವುದು? ಸಾಗಣೆ ಮತ್ತು ಖರೀದಿ ಬಿಲ್‌ಗಳು ಇವೆಯೇ? ಲೋಡ್‌ಗಟ್ಟಲೆ ಬರುವ ಮರಳಿನ ಮಾದರಿಯನ್ನು ಇಂಜಿನಿಯರ್‌ಗಳು ಲ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
ಅಧಿಕೃತ ಪಾಯಿಂಟ್ ಬಿಟ್ಟು ‘ನವಲಿ’ ನಂಟು ಏಕೆ?
ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದಲ್ಲೇ ಅಧಿಕೃತ ಮರಳು ಪಾಯಿಂಟ್ ಅಸ್ತಿತ್ವದಲ್ಲಿದೆ. ಹೀಗಿದ್ದರೂ, ಗುತ್ತಿಗೆದಾರರು ಅದನ್ನು ಬಿಟ್ಟು ನವಲಿ ಭಾಗದಿಂದ ಮರಳು ತರಿಸುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ನವಲಿ ಭಾಗದ ಮರಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕೃತ ಪರವಾನಗಿ ಇದೆಯೇ?
ಕಾಮಗಾರಿ ಸ್ಥಳಕ್ಕೆ ಬರುವ ಪ್ರತಿಯೊಂದು ವಾಹನದ ಮರಳಿನ ಗುಣಮಟ್ಟ ಪರೀಕ್ಷಿಸಲಾಗುತ್ತಿದೆಯೇ?
ಪರೀಕ್ಷಾ ವರದಿ ಬರುವ ಮೊದಲೇ ಕಾಂಕ್ರೀಟ್‌ಗೆ ಅನುಮತಿ ನೀಡಲಾಗುತ್ತಿದೆಯೇ?
ಅಧಿಕೃತ ಲ್ಯಾಬ್ ರಿಪೋರ್ಟ್ ಇಲ್ಲದೆಯೇ ಬಿಲ್ ಮಂಜೂರು ಮಾಡಲಾಗುತ್ತಿದೆಯೇ?
ಎಂಬ ಸಾಲು ಸಾಲು ಪ್ರಶ್ನೆಗಳಿಗೆ ಲೋಕೋಪಯೋಗಿ ಹಾಗೂ ಸಂಬಂಧಪಟ್ಟ ಇಲಾಖಾ ಎಂಜಿನಿಯರ್‌ಗಳು ದಾಖಲೆ ಸಮೇತ ಸ್ಪಷ್ಟನೆ ನೀಡಬೇಕಿದೆ.
ಕಟ್ಟಡದ ಆಯುಷ್ಯಕ್ಕೆ ಕುತ್ತು!
ಮರಳಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜೇಡಿಮಣ್ಣು, ಸಿಲ್ಟ್ ಹಾಗೂ ಧೂಳಿನ ಕಣಗಳಿದ್ದರೆ ಕಾಂಕ್ರೀಟ್, ಗಾರೆ ಮತ್ತು ಪ್ಲಾಸ್ಟರಿಂಗ್‌ನ ಬಾಳಿಕೆ ಹಾಗೂ ಶಕ್ತಿ ಕುಸಿಯುತ್ತದೆ. ಪರಿಣಾಮವಾಗಿ ಕಟ್ಟಡ ಲೋಕಾರ್ಪಣೆಗೊಳ್ಳುವ ಮೊದಲೇ ಗೋಡೆಗಳಲ್ಲಿ ಬಿರುಕು ಬಿಡುವುದು, ಮೇಲ್ಮೈ ಉದುರುವುದು ಹಾಗೂ ಮಳೆಗಾಲದಲ್ಲಿ ನೀರು ಸೋರಿಕೆಯಂತಹ ಗಂಭೀರ ದೋಷಗಳು ಕಾಣಿಸಿಕೊಳ್ಳುವ ಆತಂಕವಿದೆ. ಕಾಮಗಾರಿ ಪೂರ್ಣಗೊಂಡ ಮೇಲೆ ಪರಿತಪಿಸುವ ಬದಲು, ತಳಪಾಯದ ಹಂತದಲ್ಲೇ ಗುಣಮಟ್ಟ ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಈ ಬಹುಕೋಟಿ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಯಾವ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.