Tunganews

ಆನೆಗುಂದಿಯಲ್ಲಿ ಕತ್ತಲ ಸಾಮ್ರಾಜ್ಯ: 7 ತಿಂಗಳಿಂದ ಬೆಳಗದ ಬೀದಿ ದೀಪಗಳು!

Oct 20, 2026, 08:03 AM IST
ಆನೆಗುಂದಿಯಲ್ಲಿ ಕತ್ತಲ ಸಾಮ್ರಾಜ್ಯ: 7 ತಿಂಗಳಿಂದ ಬೆಳಗದ ಬೀದಿ ದೀಪಗಳು!

ತುಂಗಾವಾಣಿ.
ಗಂಗಾವತಿ: ಅ-20 ವಿಜಯನಗರ ಸಾಮ್ರಾಜ್ಯದ ಗತವೈಭವದ ತೊಟ್ಟಿಲು, ರಾಜವಂಶಸ್ಥರ ಹೆಮ್ಮೆಯ ನೆಲೆ ಹಾಗೂ ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಅಂತಾರಾಷ್ಟ್ರೀಯ ಪ್ರವಾಸಿ ತಾಣ ಆನೆಗುಂದಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಏಳು ತಿಂಗಳಿಂದ ಆಡಳಿತ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಗ್ರಾಮದ ಪ್ರಮುಖ ರಸ್ತೆ, ಐತಿಹಾಸಿಕ ಸ್ಮಾರಕಗಳ ಸಂಪರ್ಕ ರಸ್ತೆಗಳು ಹಾಗೂ ಒಳಗಿನ ಓಣಿಗಳಲ್ಲಿ ಬೀದಿ ದೀಪಗಳು ಕೆಟ್ಟು ತಿಂಗಳುಗಳು ಉರುಳಿದರೂ, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಕತ್ತಲೆಯ ಕಾರ್ಮೋಡ ಎಷ್ಟು ಆವರಿಸಿದೆ ಎಂದರೆ, ಇಡೀ ನಾಡೇ ಸಂಭ್ರಮದಿಂದ ಆಚರಿಸುವ ಐತಿಹಾಸಿಕ ವಿಜಯನಗರದ ದಸರಾ ಹಬ್ಬವನ್ನೂ ಇಲ್ಲಿನ ಗ್ರಾಮಸ್ಥರು ಅನಿವಾರ್ಯವಾಗಿ ಕಗ್ಗತ್ತಲಲ್ಲೇ ಆಚರಿಸುವಂತಾಗಿದ್ದು, ಆಡಳಿತದ ಅಣಕಕ್ಕೆ ಹಿಡಿದ ಕನ್ನಡಿಯಾಗಿದೆ.

ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ (ಹೆಡ್‌ಕ್ವಾರ್ಟರ್ಸ್) ವಾಸ್ತವ್ಯ ಹೂಡಬೇಕು ಎಂಬ ಸರ್ಕಾರದ ಸ್ಪಷ್ಟ ಆದೇಶವಿದೆ. ಆದರೆ ಆನೆಗುಂದಿಯಲ್ಲಿ ಈ ನಿಯಮ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಹಾಲಿ ಪಿಡಿಒ ಗ್ರಾಮದಲ್ಲಿ ವಾಸ್ತವ್ಯ ಹೂಡುವುದಿರಲಿ, ಕಚೇರಿ ವೇಳೆಯಲ್ಲೂ ನಿಯಮಿತವಾಗಿ ಸಿಗುತ್ತಿಲ್ಲ. ಬೆಳಿಗ್ಗೆ ಯಾವಾಗಲೋ ಒಮ್ಮೆ ಮುಖ ತೋರಿಸಿ ಮಧ್ಯಾಹ್ನವೇ ಜಾಗ ಖಾಲಿ ಮಾಡುವುದು ಇವರ ನಿತ್ಯದ ಕಾಯಕವಾಗಿದೆ. ಅಧಿಕಾರಿಗಳು ಕನಿಷ್ಠ ಒಂದು ರಾತ್ರಿಯಾದರೂ ಈ ಗ್ರಾಮದಲ್ಲಿ ಉಳಿದು, ರಸ್ತೆಯಲ್ಲಿ ನಡೆದಾಡಿದರೆ ಮಾತ್ರ ಇಲ್ಲಿನ ನೈಜ ನರಕಯಾತನೆ ಹಾಗೂ ಕತ್ತಲೆಯ ಭೀಕರತೆ ಅರಿವಾಗಲು ಸಾಧ್ಯ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆಗುಂದಿ ಕೇವಲ ಐತಿಹಾಸಿಕ ಗ್ರಾಮವಲ್ಲ, ಸುತ್ತಲೂ ದಟ್ಟ ಬೆಟ್ಟಗುಡ್ಡಗಳು ಹಾಗೂ ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುವ ಅರಣ್ಯ ಹೊಂದಿಕೊಂಡ ಪ್ರದೇಶ. ಈ ಭಾಗದಲ್ಲಿ ಕರಡಿ, ಚಿರತೆ, ಸೇರಿದಂತೆ ಅಪಾಯಕಾರಿ ವನ್ಯಜೀವಿಗಳ ಸಂಚಾರ ದಿನನಿತ್ಯದ ಮಾತಾಗಿದೆ. ಊರಿನ ಪ್ರಮುಖ ಬೀದಿಗಳಲ್ಲೇ ಕಗ್ಗತ್ತಲು ಆವರಿಸಿರುವಾಗ, ಇನ್ನು ಹಳ್ಳಿಗಳ ಒಳಭಾಗದ ಸ್ಥಿತಿ ಶೋಚನೀಯವಾಗಿದೆ. ಸಂಜೆಯಾಗುತ್ತಿದ್ದಂತೆ ವನ್ಯಜೀವಿಗಳು ಗ್ರಾಮದ ಗಡಿ ದಾಟಿ ಜನವಸತಿ ಪ್ರದೇಶಕ್ಕೆ ನುಗ್ಗುವ ಆತಂಕ ಮನೆಮಾಡಿದೆ. ಪ್ರವಾಸಿಗರು ಮಾತ್ರವಲ್ಲದೆ, ರೈತಾಪಿ ವರ್ಗವು ಹಾಗೂ ಮಹಿಳೆಯರು ಕೈಯಲ್ಲಿ ಜೀವ ಹಿಡಿದುಕೊಂಡೇ ಓಡಾಡಬೇಕಾದ ದುಸ್ಥಿತಿ ಎದುರಾಗಿದೆ.
ಗ್ರಾಮಸ್ಥರ ಎಚ್ಚರಿಕೆ:
"ವಿಶ್ವವಿಖ್ಯಾತ ಹಂಪಿಯ ಮೊದಲ ರಾಜಧಾನಿಗೆ ಇಂಥ ದುಸ್ಥಿತಿಯೇ? ಕತ್ತಲಲ್ಲೇ ದಸರಾ ಕಳೆಯುವಂಥ ಹೀನಾಯ ಪರಿಸ್ಥಿತಿ ನಮಗೆ ಬರಬೇಕಿತ್ತೇ? ಲಕ್ಷಾಂತರ ರೂಪಾಯಿ ಅನುದಾನ ಹಾಗೂ ತೆರಿಗೆ ಹಣ ಎಲ್ಲಿ ಹೋಗುತ್ತಿದೆ? ಒಂದೇ ಒಂದು ಬಲ್ಬ್ ಹಾಕಲು ಯೋಗ್ಯತೆಯಿಲ್ಲದ ಪಂಚಾಯಿತಿ ಆಡಳಿತ ನಮಗೆ ಬೇಕೆ?" ಎಂದು ಆನೆಗುಂದಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನತೆ ಪ್ರಶ್ನಿಸುತ್ತಿದ್ದಾರೆ.

ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ತಕ್ಷಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸ್ಥಾನದಲ್ಲಿ ಉಳಿಯದೆ ಕರ್ತವ್ಯಲೋಪ ಎಸಗುತ್ತಿರುವ ಪಿಡಿಒ ವಿರುದ್ಧ ಶಿಸ್ತುಕ್ರಮ ಜರುಗಿಸಿ, ತುರ್ತಾಗಿ ಬೀದಿ ದೀಪಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿಗೆ ಬೀಗ ಜಡಿದು ತಾಲೂಕು ಆಡಳಿತದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize