ತುಂಗಾವಾಣಿ.
ಗಂಗಾವತಿ: ಐತಿಹಾಸಿಕ ಆನೆಗುಂದಿ ಗ್ರಾಮದಲ್ಲಿ ಕಳೆದ ಏಳು ತಿಂಗಳಿಂದ ಆವರಿಸಿದ್ದ ಕಗ್ಗತ್ತಲು, ವನ್ಯಜೀವಿಗಳ ಉಪಟಳ ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದ ಕುರಿತು 'ತುಂಗಾವಾಣಿ' ಪ್ರಕಟಿಸಿದ ವಿಶೇಷ ತನಿಖಾ ವರದಿಗೆ ತಾಲೂಕು ಪಂಚಾಯತ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ ವೃಂದ ಬೆಚ್ಚಿಬಿದ್ದಿದೆ. ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಆಡಳಿತ, ಮಂಗಳವಾರ ಬೆಳ್ಳಂಬೆಳಿಗ್ಗೆಯೇ ಇಡೀ ಗ್ರಾಮದಲ್ಲಿ ಬೀದಿ ದೀಪಗಳ ದುರಸ್ತಿ ಮತ್ತು ಹೊಸ ಬಲ್ಬ್‌ಗಳ ಅಳವಡಿಕೆ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ.
ಖುದ್ದು ಫೀಲ್ಡಿಗಿಳಿದ ಸಿಬ್ಬಂದಿ:
ವರದಿ ಬಿತ್ತರವಾಗುತ್ತಿದ್ದಂತೆ ಗ್ರಾಮಸ್ಥರು ಮತ್ತು ಪ್ರವಾಸಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಇಕ್ಕಟ್ಟಿಗೆ ಸಿಲುಕಿದ ಪಂಚಾಯಿತಿ ಸಿಬ್ಬಂದಿ, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪಂಚಾಯಿತಿ ಸಿಬ್ಬಂದಿ ಹಾಗೂ ಲೈನ್‌ಮನ್‌ಗಳು ಗ್ರಾಮದ ಪ್ರಮುಖ ರಸ್ತೆಗಳು, ಸ್ಮಾರಕ ಸಂಪರ್ಕ ಮಾರ್ಗಗಳು ಹಾಗೂ ಒಳಭಾಗದ ಎಲ್ಲ ಓಣಿಗಳಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲೆಲ್ಲಿ ಬೀದಿ ದೀಪಗಳು ಕೆಟ್ಟಿವೆ, ಯಾವ ಕಂಬಗಳಲ್ಲಿ ಬಲ್ಬ್‌ಗಳಿಲ್ಲ ಎಂಬುದನ್ನು ಗುರುತಿಸಿ ತಕ್ಷಣವೇ ಹೊಸ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಲೂಸ್ ಕನೆಕ್ಷನ್ ಸಬೂಬು ನೀಡಿದ ಅಧಿಕಾರಿಗಳು:
ಬೀದಿ ದೀಪಗಳ ಸಮಸ್ಯೆ ಕುರಿತು ಸ್ಪಷ್ಟನೆ ನೀಡಿರುವ ಪಂಚಾಯಿತಿ ಸಿಬ್ಬಂದಿ, "ಈ ಹಿಂದೆಯೇ ಕಂಬಗಳಿಗೆ ಬಲ್ಬ್‌ಗಳನ್ನು ಅಳವಡಿಸಲಾಗಿತ್ತು. ಆದರೆ ವಿದ್ಯುತ್ ಲೈನ್‌ಗಳಲ್ಲಿ ಉಂಟಾಗಿದ್ದ ಲೂಸ್ ಕನೆಕ್ಷನ್ (ಸಡಿಲ ಸಂಪರ್ಕ) ಸಮಸ್ಯೆಯಿಂದಾಗಿ ದೀಪಗಳು ಉರಿಯುತ್ತಿರಲಿಲ್ಲ. ಈಗ ಆ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಹೊಸದಾಗಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕಂಬಗಳಲ್ಲೂ ದೀಪ ಬೆಳಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ, ಇಂದು ಸಂಜೆಯ ವೇಳೆಗೆ ಎಲ್ಲ ಬೀದಿ ದೀಪಗಳು ಸಂಪೂರ್ಣವಾಗಿ ಬೆಳಗುತ್ತಿರುವುದನ್ನು ವಿಡಿಯೋ ದಾಖಲೀಕರಣ ಮಾಡಿ ಸಾರ್ವಜನಿಕರಿಗೆ ಹಾಗೂ ಪತ್ರಿಕೆಗೆ ಸಾಕ್ಷ್ಯ ಒದಗಿಸಲಾಗುವುದು" ಎಂದು ತಿಳಿಸಿದ್ದಾರೆ.
ತುಂಗಾವಾಣಿಗೆ ಗ್ರಾಮಸ್ಥರ ಧನ್ಯವಾದ:
ಏಳು ತಿಂಗಳುಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಕಾಣದಿದ್ದ ಗ್ರಾಮದ ಸಮಸ್ಯೆ, ಮಾಧ್ಯಮ ವರದಿಯ ಬೆನ್ನಲ್ಲೇ ಒಂದೇ ದಿನದಲ್ಲಿ ಇತ್ಯರ್ಥ ಆನೆಗುಂದಿಯ ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಆಡಳಿತಕ್ಕೆ ಬಿಸಿ ಮುಟ್ಟಿಸಿ, ಕತ್ತಲೆಯಿಂದ ಮುಕ್ತಿ ದೊರಕಿಸಿಕೊಟ್ಟ 'ತುಂಗಾವಾಣಿ' ಪತ್ರಿಕೆಯ ಜನಪರ ಕಾಳಜಿಗೆ ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.