ತುಂಗಾವಾಣಿ.
ಕೊಪ್ಪಳ: ಮದುವೆಯಾಗುವುದಾಗಿ ನಂಬಿಸಿ 14 ವರ್ಷ ಪ್ರೀತಿಸಿ ಕೊನೆಗೆ ಕೈಕೊಟ್ಟಿದ್ದರಿಂದ ಮನನೊಂದು ತುಂಗಭದ್ರಾ ನದಿಗೆ ಹಾರಿ ಖಾಸಗಿ ಶಾಲಾ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಿಯಕರ ಸೇರಿ ಮೂವರು ಆರೋಪಿಗಳನ್ನು ಹೂವಿನಹಡಗಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರ ವಿಕಾಶ ಕೆ. ಕೊಪ್ಪದ, ಆತನ ಅಣ್ಣ ವಸಂತರೆಡ್ಡಿ ಕೊಪ್ಪದ ಹಾಗೂ ಅತ್ತಿಗೆ ರೇಣುಕಾ ರೆಡ್ಡಿ ಬಂಧಿತ ಆರೋಪಿಗಳು. ಇವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಪ್ಪಳ ತಾಲ್ಲೂಕಿನ ಕಾತರಕಿ ಗ್ರಾಮದ ನಿವಾಸಿ, ಖಾಸಗಿ ಶಾಲೆಯ ಶಿಕ್ಷಕಿ ಸಂಗೀತಾ ಮೇಟಿ (34) ತಮ್ಮ ಸೋದರಮಾವನ ಮಗ ವಿಕಾಶನನ್ನು ಕಳೆದ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಸಂಗೀತಾ ಮದುವೆ ಪ್ರಸ್ತಾಪ ಮಾಡಿದಾಗಲೆಲ್ಲ, "ನನಗೆ ನೀನು ಇಷ್ಟವಿಲ್ಲ, ಅಣ್ಣ-ಅತ್ತಿಗೆ ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತೇನೆ" ಎಂದು ವಿಕಾಶ ನಿರಾಕರಿಸುತ್ತಿದ್ದ. ಅಣ್ಣ ವಸಂತರೆಡ್ಡಿ ಹಾಗೂ ಅತ್ತಿಗೆ ರೇಣುಕಾ ಕೂಡ ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸುತ್ತಿದ್ದರು ಎನ್ನಲಾಗಿದೆ.
ಅ-19ರಂದು ದಸರಾ ಹಬ್ಬದ ಸಾಮಗ್ರಿ ತರಲು ಕೊಪ್ಪಳಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದ ಸಂಗೀತಾ, ಬಳಿಕ ನಾಪತ್ತೆಯಾಗಿದ್ದರು. ನಂತರ ತುಂಗಭದ್ರಾ ನದಿಯ ಮದಲಗಟ್ಟಿ ಸೇತುವೆ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಸಾವಿಗೂ ಮುನ್ನ ಸಂಗೀತಾ ಬರೆದಿದ್ದ ಡೆತ್‌ನೋಟ್ ಅನ್ನು ಅಣ್ಣ ಸಂತೋಷ ಅವರ ಮೊಬೈಲ್‌ಗೆ ವಾಟ್ಸ್‌ಆ್ಯಪ್ ಮಾಡಿದ್ದರು. "14 ವರ್ಷ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ವಿಕಾಶ ನನಗೆ ಮೋಸ ಮಾಡಿದ್ದಾನೆ. ನನ್ನ ಸಾವಿಗೆ ಈ ಮೂವರೇ ಕಾರಣ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಕಾರ್ಯಾಚರಣೆ ನಡೆಸಿ ಆರೋಪಿಗಳ ಸೆರೆ:
ಮೃತಳ ಸಹೋದರ ಸಂತೋಷ ಮೇಟಿ ನೀಡಿದ ದೂರಿನ ಮೇರೆಗೆ ತನಿಖೆ ಚುರುಕುಗೊಳಿಸಿದ ಹೂವಿನಹಡಗಲಿ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ವಿಕಾಶ ಕೊಪ್ಪದ, ವಸಂತರೆಡ್ಡಿ ಹಾಗೂ ರೇಣುಕಾ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮೂವರನ್ನೂ ಬಂಧಿಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.