ತುಂಗಾವಾಣಿ.
ಗಂಗಾವತಿ: ಒಂದೆಡೆ ರಾಜ್ಯಮಟ್ಟದ ವೇದಿಕೆಗಳಲ್ಲಿ ‘ಗ್ರಾಮೀಣಾಭಿವೃದ್ಧಿ’ ಮತ್ತು ‘ಸ್ವಚ್ಛತೆ’ಯ ಹಾಗು ಸಂಸ್ಕೃತಿಗಳ ಭರ್ಜರಿ ಭಾಷಣಗಳು; ಇನ್ನೊಂದೆಡೆ ಸಚಿವರ ತವರು ಕ್ಷೇತ್ರದಲ್ಲೇ ರಸ್ತೆಯುದ್ದಕ್ಕೂ ಹರಿಯುವ ಕಕ್ಕಸು-ರೊಚ್ಚು ನೀರು. ಇದು ಗಂಗಾವತಿ ತಾಲೂಕಿನ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸಕೇರಾ ಗ್ರಾಮದ ಇಂದಿನ ವಾಸ್ತವ ಚಿತ್ರಣ.
ಪ್ರತಿದಿನ ಸಾವಿರಾರು ಸಾರ್ವಜನಿಕರು, ಶಾಲಾ ಮಕ್ಕಳು ಮತ್ತು ವೃದ್ಧರು ಸಂಚರಿಸುವ ಮುಖ್ಯ ರಸ್ತೆಯು ಕಳೆದ ಹಲವು ವರ್ಷಗಳಿಂದ ತೆರೆದ ಚರಂಡಿಯಂತಾಗಿದ್ದು, ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಹತ್ತಾರು ಹಳ್ಳಿಗಳ ರಸ್ತೆ ರೊಚ್ಚಿನ ದಿಗ್ಬಂಧನ
ಹೊಸಕೇರಾ ಗ್ರಾಮದ ಈ ರಸ್ತೆಯು ಕೇವಲ ಸ್ಥಳೀಯ ಓಣಿಯ ಮಾರ್ಗವಲ್ಲ; ಹಣವಾಳ, ಸಿಂಗನಾಳ, ಡಗ್ಗಿ, ಕೋಟಯ್ಯಕ್ಯಾಂಪ್, ಜಂಗಮರ ಕಲ್ಗುಡಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿ. ನಿತ್ಯ ನೂರಾರು ರೈತರು, ಹಾಲು-ತರಕಾರಿ ಮಾರಾಟಗಾರರು, ವಿದ್ಯಾರ್ಥಿಗಳು ಇದೇ ಹಾದಿಯಲ್ಲಿ ತೆರಳಬೇಕು. ಆದರೆ, ಊರಿನ ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ಇಡೀ ರಸ್ತೆಯ ತುಂಬ ಗಬ್ಬು ನಾರುವ ನೀರು ಹರಿಯುತ್ತಿದೆ. ಹಬ್ಬ-ಹರಿದಿನಗಳಲ್ಲೂ ಗ್ರಾಮಸ್ಥರು ಈ ಮಲ-ಮೂತ್ರ ಮಿಶ್ರಿತ ನೀರಿನಲ್ಲೇ ನಡೆದಾಡುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪಂಚಾಯತಿ ಹೊಸ್ತಿಲಲ್ಲೇ ಅವ್ಯವಸ್ಥೆಯ ತಾಂಡವ
ವಿಪರ್ಯಾಸವೆಂದರೆ, ಈ ದುರವಸ್ಥೆ ಕಂಡುಬರುತ್ತಿರುವುದು ಹೊಸಕೇರಾ ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ಕೂದಲೆಳೆಯ ಅಂತರದಲ್ಲಿ. ಕಚೇರಿಯ ಮುಂಭಾಗದಲ್ಲೇ ಬರುವ ಬಸವಣ್ಣ ದೇವಸ್ಥಾನ ದಿಂದ ದುರ್ಗಾದೇವಿ ದೇವಾಲಯದ ವರೆಗೆ ಇಷ್ಟೆಲ್ಲ ಅನಾಹುತ ನಡೆಯುತ್ತಿದ್ದರೂ ಪಿಡಿಒ ಸಾಹೇಬರು ಹಾಗೂ ಪಂಚಾಯತಿ ಆಡಳಿತ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರದ ಸ್ವಚ್ಛತಾ ಸುತ್ತೋಲೆಗಳು, ಅನುದಾನಗಳು ಕೇವಲ ದಾಖಲೆಗಳಿಗಷ್ಟೇ ಸೀಮಿತವಾಗಿದ್ದು, ಸ್ಥಳೀಯರಿಗೆ ಕನಿಷ್ಠ ಮೂಲಸೌಕರ್ಯವೂ ಗಗನಕುಸುಮವಾಗಿದೆ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
‘ಅಧಿಕಾರಿಗಳ ಅಸಹಾಯಕತೆಯ ನಾಟಕ’
ರಸ್ತೆ ದುರಸ್ತಿ ಹಾಗೂ ಚರಂಡಿ ನಿರ್ಮಾಣದ ಬಗ್ಗೆ ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ ಸಾಹೇಬ)ರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರಗಳು ಸಿಗುತ್ತಿವೆ. “ರಸ್ತೆಯ ಅಕ್ಕಪಕ್ಕ ಒತ್ತುವರಿಯಾಗಿದೆ. ಚರಂಡಿ ತೋಡಿದರೆ ರಸ್ತೆಯೇ ಉಳಿಯುವುದಿಲ್ಲ. ರಸ್ತೆ ಸರ್ವೆ ಮಾಡಿ ಅಳತೆ ಮಾಡಿಕೊಡುವಂತೆ ಗಂಗಾವತಿಯ ಪಂಚಾಯತ್ ರಾಜ್ ಉಪವಿಭಾಗಕ್ಕೆ ಪತ್ರ ಬರೆಯಲಾಗಿದೆ,” ಎಂದು ಅಧಿಕಾರಿಗಳು ಕಾಗದದ ವ್ಯವಹಾರದ ನೆಪವೊಡ್ಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ವರ್ಷಗಳು ಉರುಳಿದರೂ ಈ ಕಾಗದದ ಕುದುರೆ ಗಂಗಾವತಿ ಕಚೇರಿಯಿಂದ ಹೊಸಕೇರಾಗೆ ಬಂದು ತಲುಪಿಲ್ಲ.
ಜನಸಾಮಾನ್ಯರಿಗೆ ಸ್ಪಂದಿಸುವ ತಂಗಡಗಿ: ಆದರೂ ಬಗೆಹರಿಯದ ಸಮಸ್ಯೆ!
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಪ್ರತಿನಿಧಿಸುವ ಕನಕಗಿರಿ ಮತಕ್ಷೇತ್ರದ ಸ್ಥಿತಿ ಇದು. ವಾಸ್ತವವಾಗಿ, ಕ್ಷೇತ್ರದ ಜನರ ಪಾಲಿಗೆ ತಂಗಡಗಿಯವರು ಇತರೆ ಸಚಿವರು ಅಥವಾ ಶಾಸಕರಂತಲ್ಲ, ಸಾಮಾನ್ಯ ಕಾರ್ಯಕರ್ತ ಕರೆ ಮಾಡಿದರೂ ತಾವೇ ಸ್ವತಃ ಫೋನ್ ರಿಸೀವ್ ಮಾಡುವ, ಬಿಡುವಿಲ್ಲದ ವೇಳೆಯಲ್ಲಿ ಮಿಸ್ಡ್ ಕಾಲ್ ಬಂದರೆ ಬಿಡುವಾದ ತಕ್ಷಣ ಮರಳಿ ಕರೆ ಮಾಡಿ ಕುಂದುಕೊರತೆ ಆಲಿಸುವ ನಾಯಕ ಎಂಬ ಹೆಗ್ಗಳಿಕೆ ಅವರಿಗಿದೆ.
ಹಾಗಿದ್ದರೂ, ಹೊಸಕೇರಾದ ಈ ನಾರುವ ರಸ್ತೆಯ ಗೋಳನ್ನು ಗ್ರಾಮದ ಅನೇಕರು ಈಗಾಗಲೇ ಸಚಿವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೂ ವರ್ಷಗಳು ಕಳೆದರೂ ಕಾಮಗಾರಿ ಕಾರ್ಯರೂಪಕ್ಕೆ ಯಾಕೆ ಬಂದಿಲ್ಲ ಎನ್ನುವುದೇ ಸಾರ್ವಜನಿಕರಲ್ಲಿ ಮೂಡಿರುವ ಮಿಲಿಯನ್ ಡಾಲರ್ ಪ್ರಶ್ನೆ. ಕಳಪೆ ಆಡಳಿತ ನಡೆಸುತ್ತಿರುವ ಸ್ಥಳೀಯ ಅಧಿಕಾರಿಗಳು ಈ ಗಂಭೀರ ಸಮಸ್ಯೆಯ ವಾಸ್ತವ ಚಿತ್ರಣವನ್ನು ಸಚಿವರ ಗಮನಕ್ಕೆ ಸರಿಯಾಗಿ ತಂದಿದ್ದಾರೋ ಇಲ್ಲವೋ ಎಂಬ ಸಂಶಯವೂ ಗ್ರಾಮಸ್ಥರನ್ನು ಕಾಡುತ್ತಿದೆ.
“ವರ್ಷಗಳಿಂದ ಈ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ ಪಂಚಾಯತಿಯವರು ಕ್ಯಾರೇ ಎನ್ನುತ್ತಿಲ್ಲ. ಮಕ್ಕಳು, ವೃದ್ಧರು ಕಾಲು ಜಾರಿ ಗಬ್ಬು ನೀರಿನಲ್ಲಿ ಬೀಳುತ್ತಿದ್ದಾರೆ. ಜನಸ್ಪಂದನೆ ತೋರುವ ಸಚಿವರ ಕ್ಷೇತ್ರದಲ್ಲೇ ನಮಗೆ ಇಂಥ ದುರ್ಗತಿ ಬಂದಿದೆ. ಅಧಿಕಾರಿಗಳು ತಕ್ಷಣ ಒತ್ತುವರಿ ತೆರವುಗೊಳಿಸಿ, ಪಕ್ಕಾ ಚರಂಡಿ ಹಾಗೂ ರಸ್ತೆ ನಿರ್ಮಿಸದಿದ್ದರೆ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುತ್ತೇವೆ.”.
—ಸ್ಥಳೀಯ ಗ್ರಾಮಸ್ಥರು, ಹೊಸಕೇರಾ
ಒಟ್ಟಿನಲ್ಲಿ, ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಂಟಿಯಾಗಿ ಎಚ್ಚೆತ್ತುಕೊಂಡು, ತಕ್ಷಣ ರಸ್ತೆ ಒತ್ತುವರಿ ತೆರವುಗೊಳಿಸಿ ಪಕ್ಕಾ ಚರಂಡಿ ನಿರ್ಮಿಸುವ ಮೂಲಕ ಸಾವಿರಾರು ಹಳ್ಳಿಗರ ಸಂಕಷ್ಟಕ್ಕೆ ಮುಕ್ತಿ ಕೊಡುತ್ತಾರಾ ಕಾದು ನೋಡಬೇಕಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.