ತುಂಗಾವಾಣಿ.
ಕುಷ್ಟಗಿ: ನೆರೆಯ ಜಿಲ್ಲೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಗಂಗಾವತಿ ಮೂಲದ ಖತರ್ನಾಕ್ ಮನೆಗಳ್ಳನಿಗೆ ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಗಂಗಾವತಿ ನಗರದ ಉಪ್ಪಿನ ಮಾಳಿ ಕ್ಯಾಂಪ್ ನಿವಾಸಿ ಪ್ರತಾಪ ಹುಲಗಪ್ಪ ಕಳ್ಳಮನಿ ಅಲಿಯಾಸ್ ಮುಚಗೇರ ಬಂಧಿತ ಆರೋಪಿ. ಈತನಿಂದ ₹4.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪ್ರತಾಪ್ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಮೊದಲೇ ಗುರುತಿಸಿ ಸಂಚು ರೂಪಿಸುತ್ತಿದ್ದ. ಮಧ್ಯರಾತ್ರಿ ಬೀಗ ಮುರಿದು ಒಳನುಗ್ಗಿ ಕ್ಷಣಾರ್ಧದಲ್ಲಿ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದ. ಇತ್ತೀಚೆಗೆ ಹನುಮಸಾಗರ ಠಾಣಾ ವ್ಯಾಪ್ತಿಯ ಹೂಲಗೇರಾ ಮತ್ತು ಬಾದಿಮನಾಳ ಗ್ರಾಮಗಳಲ್ಲಿ ನಡೆದ ಭಾರಿ ಸರಣಿ ಮನೆಗಳ್ಳತನ ಪ್ರಕರಣಗಳಲ್ಲಿ ಈತನ ಕೈವಾಡವಿರುವುದು ತನಿಖೆಯಿಂದ ದೃಢಪಟ್ಟಿದೆ.
ಬಂಧಿತ ಆರೋಪಿಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಾರು ಎಫ್ಐಆರ್ಗಳು ದಾಖಲಾಗಿವೆ. ಈ ಹಿಂದೆ ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದರೂ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದ.
ಸರಣಿ ಕಳವುಗಳಿಂದ ತಲೆನೋವಾಗಿ ಪರಿಣಮಿಸಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಾಹಿಲ್ ಬಾಗ್ಲಾ ಹಾಗೂ ಡಿವೈಎಸ್ಪಿ ನ್ಯಾಮಗೌಡ ಅವರು ವಿಶೇಷ ತಂಡ ರಚಿಸಲಾಗಿತ್ತು. ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸ್ಐ ಎಂ. ಧನಂಜಯ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಆರೋಪಿಯ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟು ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಖದೀಮನನ್ನು ಕಂಬಿ ಹಿಂದೆ ತಳ್ಳಿದ ಪೊಲೀಸ್ ಇಲಾಖೆಯ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.