ತುಂಗಾವಾಣಿ.
ಗಂಗಾವತಿ: ಕೌಟುಂಬಿಕ ಕಲಹದ ಬೇಗುದಿಯಲ್ಲಿ ರಾತ್ರೋರಾತ್ರಿ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ತಂದೆ ಹಾಗೂ ಇಬ್ಬರು ಮುಗ್ಧ ಕಂದಮ್ಮಗಳ ಬದುಕು ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ ಘಟನೆ ತಾಲ್ಲೂಕಿನ ಗಿಣಿಗೇರಾ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಗಂಗಾವತಿ ನಗರದ ಅಣ್ಣೂರ ಗೌರಮ್ಮ ಕ್ಯಾಂಪ್ ನಿವಾಸಿ ಅಮರ್ ಚೌಸ್ (36), ಇವರ ಮಕ್ಕಳಾದ ಅಮ್ಮನ್ (8) ಹಾಗೂ ಪುತ್ರಿ ಅಮಯ್ಯಾರ (6) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ:
ಅಮರ್ ಚೌಸ್ ಹಾಗೂ ಅವರ ಪತ್ನಿ ನಡುವೆ ಕೌಟುಂಬಿಕ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೋರಿತ್ತು. ಇದರಿಂದ ಮನನೊಂದ ಪತ್ನಿ ಗಂಗಾವತಿಯಿಂದ ಕೊಪ್ಪಳದಲ್ಲಿದ್ದ ತವರು ಮನೆಗೆ ತೆರಳಿದ್ದರು. ಪತ್ನಿಯನ್ನು ಸಮಾಧಾನಪಡಿಸಿ ವಾಪಸ್ ಗಂಗಾವತಿಗೆ ಕರೆದೊಯ್ಯುವ ಉದ್ದೇಶದಿಂದ ಅಮರ್ ಬೈಕ್ನಲ್ಲಿ ಕೊಪ್ಪಳಕ್ಕೆ ತೆರಳಿದ್ದರು. ಆದರೆ ಅಲ್ಲಿ ದಂಪತಿ ನಡುವೆ ಮತ್ತೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ತೀವ್ರ ವಿಚಲಿತಗೊಂಡು ಆಕ್ರೋಶಗೊಂಡ ಅಮರ್, ಮಧ್ಯರಾತ್ರಿಯೇ ತನ್ನಿಬ್ಬರು ಮಕ್ಕಳನ್ನು ಬೈಕ್ ಮೇಲೆ ಕೂರಿಸಿಕೊಂಡು ಕೊಪ್ಪಳದಿಂದ ಗಂಗಾವತಿಯತ್ತ ಪ್ರಯಾಣ ಬೆಳೆಸಿದ್ದರು.
ಗಿಣಿಗೇರಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ, ಗಂಗಾವತಿ ಕಡೆಯಿಂದ ವೇಗವಾಗಿ ಬಂದ ಲಾರಿ ಹಾಗೂ ಇವರ ಬೈಕ್ ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಂದೆ ಹಾಗೂ ಇಬ್ಬರು ಮಕ್ಕಳು ರಸ್ತೆಯಲ್ಲೇ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.