ತುಂಗಾವಾಣಿ.
ಗಂಗಾವತಿ: ಫೆ-09 ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಫೆಬ್ರವರಿ 12ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ನಗರದಲ್ಲಿ ಅಂದು 'ಸ್ವಯಂಪ್ರೇರಿತ ಬಂದ್' ಆಚರಿಸಲು ವಿವಿಧ ಕಾರ್ಮಿಕ, ರೈತ ಹಾಗೂ ಕೂಲಿಕಾರ ಸಂಘಟನೆಗಳು ಕರೆ ನೀಡಿವೆ.
ನಗರದ ಬಸವೇಶ್ವರ ವೃತ್ತದಲ್ಲಿ ಮುಷ್ಕರದ ಕರಪತ್ರಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ, ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಲಾಯಿತು.
ಪ್ರಮುಖ ಬೇಡಿಕೆಗಳು:
ಲೇಬರ್ ಕೋಡ್ ರದ್ದತಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕು.
ನರೇಗಾ ಸಬಲೀಕರಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಳೆಯ ಮಾದರಿಯಲ್ಲೇ ಮರುಸ್ಥಾಪಿಸಿ, ದಿನಕ್ಕೆ ₹600 ಕೂಲಿ ಹಾಗೂ 200 ದಿನಗಳ ಕೆಲಸ ಖಾತ್ರಿಪಡಿಸಬೇಕು. ಕಾರ್ಮಿಕರ ಕನಿಷ್ಠ ವೇತನವನ್ನು ₹41,000 ಕ್ಕೆ ಪರಿಷ್ಕರಿಸಿ ಜಾರಿಗೊಳಿಸಬೇಕು. ವಿದ್ಯುತ್ ತಿದ್ದುಪಡಿ ಕಾಯ್ದೆ, ವಿಮಾ ಕಾಯ್ದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.
"ಖಾಸಗೀಕರಣ, ಅತಿಯಾದ ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದಾಗಿ ದುಡಿಯುವ ವರ್ಗ ಇಂದು ಬೀದಿಗೆ ಬೀಳುವಂತಾಗಿದೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲು ಉತ್ಪಾದನೆ, ಸೇವೆ ಹಾಗೂ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ ಯಶಸ್ವಿಗೊಳಿಸಬೇಕು, ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಎಐಸಿಸಿಟಿಯು ಉಪಾಧ್ಯಕ್ಷ ಸಣ್ಣ ಹನುಮಂತ, ಎಐಎಡಬ್ಲ್ಯೂಯು ಜಿಲ್ಲಾಧ್ಯಕ್ಷ ಬಸವರಾಜ್ ಮರಕುಂಬಿ, ಹುಸೇನಪ್ಪ ಕೆ., ಮಂಜುನಾಥ್ ಡಗ್ಗಿ, ಶ್ರೀನಿವಾಸ, ಮುತ್ತು ದಾಸ್ನಾಳ, ಎ. ಬಸವರಾಜ್, ಎ. ರಮೇಶ್, ರವಿ ಅಕ್ಕಿರೊಟ್ಟಿ, ದುರುಗಪ್ಪ ದಾಸ್ನಾಳ, ಹನುಮಂತ ಹೆಬ್ಬಾಳ ಹಾಗೂ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವುಕುಮಾರ್ ಈಚನಾಳ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ನೈಜ ಸುದ್ದಿಗಾಗಿ ತುಂಗಾವಾಣಿ.