ತುಂಗಾವಾಣಿ.
ಗಂಗಾವತಿ..ಫೆ.16: ಕಳೆದ ಹಲವು ದಿನಗಳಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷನ ನೇಮಕ ಸುದ್ದಿ ಪತ್ರಿಕೆಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಗುಟ್ಟಾಗಿ ಅಧ್ಯಕ್ಷನ ನೇಮಕಾತಿ ಮಾಡಿದ ಜಿಲ್ಲಾಧ್ಯಕ್ಷನ ಉದ್ದೇಶದ ಹಿಂದಿನ ರಹಸ್ಯ ಒಂದೊಂದಾಗಿ ಬಯಲಾಗುತ್ತಿವೆ. ಈ ನೇಮಕಾತಿಯಿಂದ ಅಸಮಧಾನಗೊಂಡ ಸಂಘದ ಸದಸ್ಯರು ಒಬ್ಬೊಬ್ಬರಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪತ್ರಕರ್ತರ ಸಂಘ ಅಂದ್ರೆ ಸಮಾಜದ ಅವ್ಯವಸ್ಥೆಯನ್ನು ಬಿಂಬಿಸುವ ಕನ್ನಡಿಯಂತಹದು ಎಂಬುದು ಸಾರ್ವಜನಿಕರ ನಂಬಿಕೆಯಾಗಿತ್ತು. ಆ ನಂಬಿಕೆ ಹುಸಿ ಮಾಡುವಂತೆ ಸಂಘದಲ್ಲಿ ಕುರ್ಚಿಗಾಗಿ 'ಮ್ಯೂಸಿಕಲ್ ಚೇರ್' ಆಟ ಆರಂಭವಾಗಿದೆ. ಯಾರು ಯಾರ ಬೆನ್ನಿಗೆ ಚೂರಿ ಹಾಕಿದ್ದಾರೆ..?. ಯಾರು ಯಾರ ಕಾಲು ಎಳೆದಿದ್ದಾರೆ. ಯಾರು, ಯಾರು ಆಮಿಷಕ್ಕೆ ಬಲಿಯಾಗಿದ್ದಾರೆ ಎಂಬುದು ಬಯಲಾಗುತ್ತಿದೆ. ಇದು ಒಂದು ರೀತಿ ನಿತ್ಯ ರಾಜಕೀಯ ಮಾಡುವ ರಾಜಕಾರಣಿಳೇ ಹೇಸಿಗೆ ಪಡುವಂತಿದೆ.
ಏಕಪಕ್ಷೀಯ ನಿರ್ಧಾರದಿಂದ ಹಳಿ ತಪ್ಪಿದ ಹಳ್ಳಿಕೇರಿ!
ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ ಅದ್ಯಾವ ಆಮಿಷಕ್ಕೆ ಬಲಿಯಾದರೋ ಗೊತ್ತಿಲ್ಲ. ಏಕಾಏಕಿ ಸಂಘದ ಬೈಲಾ ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಅಧ್ಯಕ್ಷನ ಘೋಷಣೆ ಮಾಡಿ ಆದೇಶ ಹೊರಡಿಸಿ ಬಿಟ್ಟಿದ್ದಾರೆ. ಸದ್ಯಕ್ಕೆ ಈ ನಿರ್ಧಾರ ಅವರ ಬುಡಕ್ಕೆ ಬಂದು ನಿಂತಿದೆ. ರಾಜ್ಯಾಧ್ಯಕ್ಷ ಹನುಮಂತ ಹಳ್ಳಿಕೇರಿಗೆ ಅದ್ಯಾವ ಪರಿ ಗದರಿದ್ದಾರೆ ಎಂದರೆ ಮೊದಲು ಆದೇಶ ರದ್ದು ಮಾಡು. ನಂತರ ಸರ್ವ ಸದಸ್ಯರ ಒಮ್ಮತದಂತೆ ಅಧ್ಯಕ್ಷನ ಆಯ್ಕೆ ಘೊಷಣೆ ಮಾಡು ಎಂದಿದ್ದಾರೆ. ಇದರಿಂದ ಹಳ್ಳಿಕೇರಿ ಇಕ್ಕಟ್ಟಿಗೆ ಸಿಲುಕುದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೆ ಘೋಷಣೆ ಮಾಡಿದ್ದರೆ ಆದೇಶ ಹಿಂಪಡೆಯಬಹುದಿತ್ತು. ಆದರೆ, ಇನ್ನೂ ಆದೇಶ ಹಿಂಪಡೆಯದೆ ಅವರಿವನ್ನು ಸಮಾಧಾನ ಪಡಿಸಲು ಪಡಿಪಾಟಲು ಪಡುತ್ತಿರುವುದು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ.
ಸದ್ಯಕ್ಕೆ ಅತೃಪ್ತಬಣದ ಒಂದೇ ಪ್ರಶ್ನೆ ಎಂದರೆ ಸಂಘದ ಬೈಲಾ ಎಲ್ಲಿ ಹೋಯ್ತು..? ನಿಯಮಗಳು ಯಾಕೆ ಪಾಲನೆ ಆಗಿಲ್ಲ..?. ನಾನು ಹೇಳಿದ್ದೇ ಶಾಸನ, ನಾನು ಬರೆದಿದ್ದೇ ಆದೇಶ ಅನ್ನೋ ಈ ಸರ್ವಾಧಿಕಾರಿ ಧೋರಣೆ ಯಾಕೆ..?
ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ ಮಠ್ ಅವರು ತಮ್ಮ ಬೆಂಬಲಿಗರ ದೊಡ್ಡ ಪಡೆಯನ್ನೇ ಕಟ್ಟಿಕೊಂಡು ಹೋಗಿ ಸಹಿ ಹಾಕಿದ ಪಟ್ಟಿ ಕೊಟ್ಟಿದ್ದರು. ಆದರೆ, ಆ ಪಟ್ಟಿಯನ್ನು ಕಸದ ಬುಟ್ಟಿಗೆ ಎಸೆದ ಜಿಲ್ಲಾಧ್ಯಕ್ಷರು, ಕನಿಷ್ಠ ಪಕ್ಷ ಆ ಸದಸ್ಯರ ಮುಖವನ್ನೂ ನೋಡುವ ಸೌಜನ್ಯ ತೋರಲಿಲ್ಲ. ಇದನ್ನು ಏನನ್ನಬೇಕು...? 'ಸ್ನೇಹ'ವೋ ಅಥವಾ ಯಾವುದೋ 'ಆಮಿಷ' ಶಕ್ತಿಯ ಪವಾಡವೋ..?. ಸಾಲದೆಂಬಂತೆ ನಾನು ಸಹಿ ಮಾಡಿದವರನ್ನು ಕೇಳಿದ್ದೇನೆ ಅಂತ ಹಳ್ಳಿಕೇರಿ ಸುಳ್ಳು ಬೇರೆ ಹೇಳಿದ್ದಾರೆ. ಯಾರನ್ನು ಕೇಳಿದ್ರಿ ಸರ್...? ನಿಮ್ಮ ಮನೆಯ ಗೋಡೆಗಳನ್ನಾ..? ಅಥವಾ ನಿಮ್ಮ ಬೆನ್ನಹಿಂದಿನ ನೆರಳನ್ನಾ...?.
ತಗಡೂರು ಹಾಕಿದ 'ಬ್ರೇಕ್' ಗೆ ಗದ್ದುಗೆ ಅತಂತ್ರ!
ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೂ ಗೊತ್ತು, ಎಲ್ಲೆಲ್ಲಿ ಬೆಂಕಿ ಹೊತ್ತಿಕೊಂಡಿದೆ ಅಂತ. ಯಾವಾಗ ದೂರು ಹೋಗಿ ಅವರ ಟೇಬಲ್ ಮೇಲೆ ಬಿದ್ದಿತೋ ತಕ್ಷಣವೇ ಈ 'ಅಕ್ರಮ' ನೇಮಕಾತಿಗೆ ತಡೆ ನೀಡಿದ್ದಾರೆ. ಈಗ ಘೋಷಣೆಯಾದ 'ಅಧ್ಯಕ್ಷ, ಕಾರ್ಯದರ್ಶಿಯ ಪರಿಸ್ಥಿತಿ ಹೇಗಿದೆ ಗೊತ್ತಾ..?. ಮದುವೆ ಮಂಟಪಕ್ಕೆ ಬಂದು ತಾಳಿ ಕಟ್ಟುವ ಮೊದಲೇ ವಧು ಏಕಾಏಕಿ ಕೈಬಿಟ್ಟು ಓಡಿಹೋದಂತಾಗಿದೆ.
ಕಾನೂನು ಸಮರ:
ಹಿರಿಯ ಪತ್ರಕರ್ತ ಬೆಳಗಲ್ ಮಠ್ ಸುಮ್ಮನೆ ಕೂರುವ ಮನುಷ್ಯನಲ್ಲ. ನ್ಯಾಯ ಸಿಗದಿದ್ದರೆ ಸಂಬಂಧಿಸಿದವರನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸುತ್ತೇನೆ ಎಂದು ಗುಡುಗಿದ್ದಾರೆ. ಈಗಾಗಲೇ ಕಾನೂನು ಹೋರಾಟದ ಪ್ರಕ್ರಿಯೆಯನ್ನೂ ಕೂಡ ಆರಂಭಿಸುವ ಸಿದ್ದತೆ ನಡೆಸಿದ್ದಾರೆ. ಆದರೆ ರಾಜ್ಯಾಧ್ಯಕ್ಷರ ಮೇಲಿನ ಗೌರವದಿಂದ ಕಾಯ್ದು ನೋಡು ತಂತ್ರ ಅನುಸರಿಸುತ್ತಿದ್ದಾರೆ.
ಕೊನೆಯ ಮೊಳೆ
ಪತ್ರಕರ್ತರು ಬೇರೆಯವರ ಹಗರಣಗಳನ್ನು ಬಯಲಿಗೆಳೆಯುತ್ತಾರೆ. ಆದರೆ ತಮ್ಮದೇ ಸಂಘದ ಒಳಗಿರುವ ಈ 'ಕಗ್ಗತ್ತಲೆ'ಯನ್ನು ಯಾರು ಸರಿಪಡಿಸುತ್ತಾರೆ..?. ಲೇಖನಿ ಹಿಡಿದ ಕೈಗಳು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದರೆ ಜನ ನಗುವುದಿಲ್ಲವೇ..?. ಗಂಗಾವತಿಯ ಈ ಕುರ್ಚಿ ಕಾಳಗದ ಕ್ಲೈಮ್ಯಾಕ್ಸ್ ಹೇಗಿರುತ್ತೆ ಅನ್ನೋದೇ ಸದ್ಯದ ಕುತೂಹಲ.
(ಅಧ್ಯಕ್ಷ ಸ್ಥಾನಕ್ಕಾಗಿ ಕೊಪ್ಪಳದಲ್ಲಿ ಹಣಕಾಸಿನ ವ್ಯವಹಾರ ನಡೆಯಿತಾ..?)
(ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನ ಲಾಭದ ಹುದ್ದೆಯಾ..?, ಯಾಕೀ ಪೈಪೋಟಿ)
ಇನ್ನಷ್ಟು ರೋಚಕ ವರದಿಗಳು ಮುಂದೊರೆಯಲಿದೆ...
ನೈಜ ಸುದ್ದಿಗಾಗಿ ತುಂಗಾವಾಣಿ.