ತುಂಗಾವಾಣಿ.
ಕೊಪ್ಪಳ: ಕಡುಬಡತನದಲ್ಲೂ ಛಲಬಿಡದೆ ಓದಿ ಸರ್ಕಾರಿ ಮೆಡಿಕಲ್ ಸೀಟ್ ಪಡೆದಿದ್ದ ಕೊಪ್ಪಳದ ಆಟೋ ಚಾಲಕನ ಕುಟುಂಬಕ್ಕೆ ನೆರವಾಗಬೇಕಿದ್ದ ದಾನಿಗಳ ಹಣಕ್ಕೇ ಸೈಬರ್ ಖದೀಮರು ಕನ್ನ ಹಾಕಿದ್ದಾರೆ. ಆಂಧ್ರಪ್ರದೇಶದ ಪ್ರಸಿದ್ಧ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹೆಸರಿನಲ್ಲಿ ಕರೆ ಮಾಡಿ ₹3 ಲಕ್ಷ ವಿದ್ಯಾರ್ಥಿವೇತನ ನೀಡುವುದಾಗಿ ನಂಬಿಸಿ, ಜಿಎಸ್‌ಟಿ ಶುಲ್ಕದ ನೆಪವೊಡ್ಡಿ ಬರೋಬ್ಬರಿ ₹60,000 ಲಪಟಾಯಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಕೊಪ್ಪಳದ ಆಟೋ ಚಾಲಕರೊಬ್ಬರ ಇಬ್ಬರು ಮಕ್ಕಳು ಇತ್ತೀಚೆಗೆ ವೈದ್ಯಕೀಯ ಸೀಟು ಪಡೆದು ಸಾಧನೆ ಮಾಡಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಕಂಡು ಹಲವು ಸಹೃದಯ ದಾನಿಗಳು ವಿದ್ಯಾರ್ಥಿಯ ನೆರವಿಗೆ ಧಾವಿಸಿ, ಆತನ ಬ್ಯಾಂಕ್ ಖಾತೆಗೆ ಧನಸಹಾಯ ಕಳುಹಿಸಿದ್ದರು. ಖಾತೆಯಲ್ಲಿ ಹಣ ಜಮೆಯಾಗಿರುವ ಸುಳಿವು ಅರಿತ ವಂಚಕರ ಗ್ಯಾಂಗ್, ವಿದ್ಯಾರ್ಥಿಯನ್ನೇ ಗುರಿಯಾಗಿಸಿಕೊಂಡು ಸಂಚು ರೂಪಿಸಿದೆ.
ಮಠದ ಹೆಸರಿನಲ್ಲಿ ಬಲೆ:
ವಿದ್ಯಾರ್ಥಿಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು, "ನಾವು ಮಂತ್ರಾಲಯ ಮಠದ ಆಡಳಿತ ಕಚೇರಿಯಿಂದ ಮಾತನಾಡುತ್ತಿದ್ದೇವೆ. ನಿಮ್ಮ ವೈದ್ಯಕೀಯ ಶಿಕ್ಷಣ ವೆಚ್ಚಕ್ಕಾಗಿ ಮಠದ ವತಿಯಿಂದ ₹3 ಲಕ್ಷ ಧನಸಹಾಯ ಮಂಜೂರು ಮಾಡಲಾಗಿದೆ" ಎಂದು ನಂಬಿಸಿದ್ದಾರೆ. ಮರುದಿನ ಪುನಃ ಕರೆ ಮಾಡಿ, "ದೊಡ್ಡ ಮೊತ್ತವಾಗಿರುವುದರಿಂದ ಫೋನ್‌ಪೇ ಮೂಲಕ ಜಮೆ ಮಾಡಲು ತಾಂತ್ರಿಕ ಅಡೆತಡೆಯಿದೆ. ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ" ಎಂದು ಹೇಳಿ ವಿದ್ಯಾರ್ಥಿಯ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾರೆ.
ಜಿಎಸ್‌ಟಿ ನೆಪದಲ್ಲಿ ₹60 ಸಾವಿರ ವಂಚನೆ:
ಖಾತೆಗೆ ₹3 ಲಕ್ಷ ಜಮೆಯಾಗಬೇಕಾದರೆ ಸರ್ಕಾರದ ನಿಯಮಾವಳಿಯಂತೆ ₹45,000 ಜಿಎಸ್‌ಟಿ ಪಾವತಿಸಬೇಕು ಎಂದು ವಂಚಕರು ಷರತ್ತು ವಿಧಿಸಿದ್ದಾರೆ. ಮಠದ ನೆರವು ಸಿಗಬಹುದೆಂಬ ಆಸೆಯಿಂದ ನಂಬಿದ ವಿದ್ಯಾರ್ಥಿ, ದಾನಿಗಳು ತನಗೆ ಕಳುಹಿಸಿದ್ದ ಹಣದಲ್ಲೇ ಮೊದಲ ಹಂತವಾಗಿ ₹45,000 ವರ್ಗಾಯಿಸಿದ್ದಾನೆ. ನಂತರ ಮತ್ತೆ ಕರೆ ಮಾಡಿದ ವಂಚಕರು, ಇನ್ನೂ ₹15,000 ಬಾಕಿ ಇದೆ ಎಂದು ಪುಸಲಾಯಿಸಿ ಒಟ್ಟು ₹60,000 ಪಾವತಿಸಿಕೊಂಡಿದ್ದಾರೆ.
ಮತ್ತೆ ಬೇಡಿಕೆ ಇಟ್ಟಾಗ ಬಯಲು:
₹60 ಸಾವಿರ ಕಬಳಿಸಿದ ಮೇಲೂ ಭರವಸೆ ನೀಡಿದ್ದ ₹3 ಲಕ್ಷ ಜಮೆಯಾಗಲಿಲ್ಲ. ಅನುಮಾನ ಬಾರದಂತೆ ಮತ್ತೆ ಕರೆ ಮಾಡಿದ ಖದೀಮರು, ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ₹45,000 ಬೇಕೆಂದು ಪೀಡಿಸಿದ್ದಾರೆ. ವಂಚನೆಯ ವಾಸನೆ ಅರಿತ ವಿದ್ಯಾರ್ಥಿ, ತನ್ನ ಹಣವನ್ನು ಕೂಡಲೇ ಹಿಂದಿರುಗಿಸುವಂತೆ ಪಟ್ಟುಹಿಡಿದು, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಕಂಗಾಲಾದ ವಂಚಕರು ತಕ್ಷಣ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.
ಸೈಬರ್ ಠಾಣೆಯಲ್ಲಿ ದೂರು ದಾಖಲು:
ಕಷ್ಟಪಟ್ಟು ಓದಿ ಸಾಧನೆ ಮಾಡಿದ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಬಂದಿದ್ದ ಹಣವನ್ನೇ ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಘಟನೆ ಸಂಬಂಧ ವಿದ್ಯಾರ್ಥಿಯ ತಂದೆ ಕೊಪ್ಪಳದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ವರ್ಗಾವಣೆಯಾದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ, ಖಾತೆದಾರರಿಗೆ ನೋಟಿಸ್ ಜಾರಿಗೊಳಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
"ಪ್ರಕರಣದ ತನಿಖೆ ಮುಂದುವರಿದಿದೆ. ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರನ್ನು ಗುರುತಿಸಲಾಗಿದ್ದು, ನೋಟಿಸ್ ನೀಡಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಯಾವುದೇ ಸಂಶಯಾಸ್ಪದ ಕರೆ, ಮಠ-ಮಾನ್ಯ ಅಥವಾ ಟ್ರಸ್ಟ್‌ಗಳ ಹೆಸರಿನಲ್ಲಿ ಬರುವ ಆಮಿಷಗಳಿಗೆ ಮರುಳಾಗಿ ಮುಂಗಡ ಹಣ ವರ್ಗಾವಣೆ ಮಾಡಬಾರದು."
— ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ, ಕೊಪ್ಪಳ
ನೈಜ ಸುದ್ದಿಗಾಗಿ ತುಂಗಾವಾಣಿ ಓದರಿ.